1915ರಲ್ಲಿ ಕಳವಾದ ವಿಗ್ರಹ ಅರ್ಚಕನ ಮನೆಯಲ್ಲಿ ಪತ್ತೆ

Update: 2019-04-29 16:41 GMT

ಹೊಸದಿಲ್ಲಿ, ಎ. 29: ಮಧುರೈ ಸಮೀಪದ ದೇವಾಲಯದಿಂದ 1915ರಲ್ಲಿ ಕಳವಾಗಿದ್ದ ವಿಗ್ರಹ ಮನೆಯೊಂದರ ಗೋಡೆಯ ಒಳಗೆ ಪತ್ತೆಯಾಗಿದೆ. ಈ ವಿಗ್ರಹ 700 ವರ್ಷ ಪ್ರಾಚೀನವಾದುದು ಎಂದು ನಂಬಲಾಗಿದೆ. ದೇವಾಲಯದ ಇಬ್ಬರು ಅರ್ಚಕರಲ್ಲಿ ಒಬ್ಬರಾದ ಕಂದಸಾಮಿ ಈ ವಿಗ್ರಹವನ್ನು ದೇವಾಲಯದಿಂದ 1915ರಲ್ಲಿ ಕಳವುಗೈದಿದ್ದರು. ಈ ದೇವಾಲಯ ಮಧುರೈ ಸಮೀಪದ ಮೇಲೂರ್‌ನ ನಾಗೈಕ್ಕಡಾಯಿ ಬೀದಿಯಲ್ಲಿ ಇದೆ.

 ಈ ದೇವಾಲಯ 800 ವರ್ಷ ಹಳೆಯದ್ದೆಂದು ವರದಿ ಹೇಳಿದೆ. ಇನ್ನೋರ್ವ ಅರ್ಚಕನೊಂದಿಗಿನ ಭಿನ್ನಾಭಿಪ್ರಾಯದಿಂದ ಕಂದಸ್ವಾಮಿ ಈ ವಿಗ್ರಹವನ್ನು ಕಳವುಗೈದು ತನ್ನ ಮನೆಗೆ ಕೊಂಡೊಯ್ದಿದ್ದರು. ಈ ಬಗ್ಗೆ ಬ್ರಿಟಿಶ್ ಪೊಲೀಸರಿಗೆ ದೂರು ನೀಡಲಾಗಿತ್ತು. ಅವರು ತನಿಖೆ ನಡೆಸಿದ್ದರು. ಆದರೆ, ವಿಗ್ರಹ ಪತ್ತೆಯಾಗಿರಲಿಲ್ಲ. ಈ ನಡುವೆ ಕಂದಸಾಮಿ ಗೋಡೆಯಲ್ಲಿ ರಂಧ್ರ ಕೊರೆದು ಈ ವಿಗ್ರಹವನ್ನು ಇರಿಸಿದ್ದರು. ಅನಂತರ ಗೋಡೆಗೆ ಸಾರಣೆ ಮಾಡಿದ್ದರು. ಆರು ತಿಂಗಳ ಹಿಂದೆ ಕಂದಸಾಮಿ ಮೊಮ್ಮಗ ಹಾಗೂ ನಮಕ್ಕಲ್‌ನಲ್ಲಿ ಚಹಾ ಅಂಗಡಿ ನಡೆಸುತ್ತಿರುವ ಕೆ. ಮುರುಗೇಶನ್ ಅದೇ ದೇವಾಲಯಕ್ಕೆ ತೆರಳಿ ‘‘ನನ್ನ ಅಜ್ಜ ವಿಗ್ರಹವನ್ನು ಪೂರ್ವಜರ ಮನೆಯ ಗೋಡೆಯಲ್ಲಿ ಅಡಗಿಸಿ ಇಟ್ಟಿರುವ ಸಾಧ್ಯತೆ ಇದೆ” ಎಂದು ತಿಳಿಸಿದ್ದರು. ತಾತ ನಿರ್ದಿಷ್ಟ ಗೋಡೆಯ ಎದುರು ಪ್ರಾರ್ಥನೆ ಮಾಡುತ್ತಿದ್ದುದು ಅವರ ಸಂಶಯಕ್ಕೆ ಇನ್ನಷ್ಟು ಪುಷ್ಠಿ ನೀಡಿತ್ತು

 ಮರುಗೇಶನ್ ನೀಡಿದ ದೂರಿನ ಆದಾರದಲ್ಲಿ ಆ ಮನೆ ಧ್ವಂಸ ಮಾಡಲು ಮನೆಯ ಈಗಿನ ಮಾಲಕರಲ್ಲಿ ಪೊಲೀಸರು ಅನುಮತಿ ಕೋರಿದ್ದರು. ಅನುಮತಿಯೊಂದಿಗೆ ರವಿವಾರ ಈ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭ ಮರುಗೇಶನ್ ಹೇಳಿದ ಖಚಿತ ಸ್ಥಳದಲ್ಲಿ ವಿಗ್ರಹ ಪತ್ತೆಯಾಯಿತು. ವಿಗ್ರಹ 1.5 ಅಡಿ ಎತ್ತರವಿದೆ. ಅದು ದ್ರುಪದಿ ಅಮ್ಮನ್ ವಿಗ್ರಹ. ದೇವಾಲಯದಲ್ಲಿ ಕಾಯ್ದುಕೊಂಡು ಬರಲಾದ ದಾಖಲೆ ಹಾಗೂ ವಿಗ್ರಹದ ವಿವರಕ್ಕೆ ಹೋಲಿಕೆಯಾಗುತ್ತಿದೆ. ಅನಂತರ ಈ ವಿಗ್ರಹವನ್ನು ದೇವಾಲಯಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News