ಪುದುಚ್ಚೇರಿ ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರವಾಗಿ ಕಾರ್ಯಾಚರಿಸುವಂತಿಲ್ಲ: ಮದ್ರಾಸ್ ಹೈಕೋರ್ಟ್

Update: 2019-04-30 09:37 GMT

ಚೆನ್ನೈ :  ವಿತ್ತ, ಆಡಳಿತ ಹಾಗೂ ಸೇವೆಗಳಿಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರವಾಗಿ ಕಾರ್ಯಾಚರಿಸಲು ಸಾಧ್ಯವಿಲ್ಲ, ಬದಲಾಗಿ ಸಚಿವ ಸಂಪುಟದ ಸಲಹೆಯಂತೆ ನಡೆದುಕೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿರುವುದು ಪುದುಚ್ಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಗೆ ದೊಡ್ಡ ಹಿನ್ನಡೆಯುಂಟು ಮಾಡಿದೆ.

ವಿವಿಧ ಸೇವೆಗಳಿಗೆ ಸಂಬಂಧಿಸಿದಂತೆ ಸರಕಾರಕ್ಕೆ ಹೆಚ್ಚಿನ ಅಧಿಕಾರವಿದೆ ಎಂದು ಕಾಂಗ್ರೆಸ್ ಶಾಸಕ ಕೆ ಲಕ್ಷ್ಮೀನಾರಾಯಣ ಅವರ  ಅಪೀಲನ್ನು ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟಿನ ಮಧುರೈ ಪೀಠ, ತನ್ನ ತೀರ್ಪಿನಲ್ಲಿ  ಹೇಳಿತಲ್ಲದೆ ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕಾರಗಳ ಕುರಿ ತಂತೆ 2017ರಲ್ಲಿ  ಕೇಂದ್ರ  ಹೊರಡಿಸಿದ ಎರಡು ಸ್ಪಷ್ಟೀಕರಣ ಆದೇಶಗಳನ್ನು ರದ್ದುಗೊಳಿಸಿದೆ.

ತೀರ್ಪನ್ನು ಅಧ್ಯಯನ ನಡೆಸಿದ ನಂತರ ಪ್ರತಿಕ್ರಿಯಿಸುವುದಾಗಿ ಕಿರಣ್ ಬೇಡಿ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಬೇಡಿ ಅವರೇ ಕೇಳಿದ್ದ ಸ್ಪಷ್ಟೀಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ಎರಡು ಆದೇಶಗಳನ್ನು ಹೊರಡಿಸಿ ಲೆಫ್ಟಿನೆಂಟ್ ಗವರ್ನರ್ ಗೆ ಸ್ವತಂತ್ರವಾಗಿ ಕಾರ್ಯಾಚರಿಸಲು ಅಧಿಕಾರವಿದೆ ಹಾಗೂ ಸಚಿವ ಸಂಪುಟಕ್ಕೆ ಬೇಕಾದಂತೆ ಕಾರ್ಯಾಚರಿಸಬೇಕೆಂದೇನೂ ಇಲ್ಲ ಎಂದು ಹೇಳಿತ್ತು.

ಖಾಸಗಿ ವೈದ್ಯಕೀಯ ಕಾಲೇಜು ಪ್ರವೇಶಾತಿ ಹಗರಣದಲ್ಲಿ ಕಿರಣ್ ಬೇಡಿ ಹಸ್ತಕ್ಷೇಪ ನಡೆಸಿ ಹಲವಾರು ವೈದ್ಯಕೀಯ ಕಾಲೇಜುಗಳ ತಪಾಸಣೆ ನಡೆಸಿ ಸರಕಾರಿ ಕಡತಗಳನ್ನು ಪರಿಶೀಲಿಸಿದ  ನಂತರ ಅವರ ಹಾಗೂ ಪುದುಚ್ಚೇರಿ ಸಿಎಂ ವಿ ನಾರಾಯಣಸ್ವಾಮಿ ನಡುವಿನ  ಭಿನ್ನಮತ ತಾರಕಕ್ಕೇರಿದ ಸಂದರ್ಭ ಲಕ್ಷ್ಮೀನಾರಾಯಣ ಕೋರ್ಟ್ ಕದ ತಟ್ಟಿದ್ದರು.

ಕಿರಣ್ ಬೇಡಿ ಪುದುಚ್ಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರವನ್ನು 2016ರಲ್ಲಿ ಸ್ವೀಕರಿಸಿದಂದಿನಿಂದ  ಆಕೆ ಮತ್ತು ಅಲ್ಲಿನ ಕಾಂಗ್ರೆಸ್ ಸರಕಾರದ ನಡುವೆ ಜಟಾಪಟಿ ನಡೆಯುತ್ತಿದ್ದು ಆಕೆ ಉದ್ದೇಶಪೂರ್ವಕವಾಗಿ ಕಡತಗಳ ವಿಲೇವಾರಿಯನ್ನು ವಿಳಂಬಿಸುತ್ತಿದ್ದಾರೆ ಹಾಗೂ ಸರಕಾರ ವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆಕೆಯ ಹಲವು ನಿರ್ಧಾರಗಳನ್ನು ವಿರೋಧಿಸಿ ಸಿಎಂ ನಾರಾಯಣಸ್ವಾಮಿ ಫೆಬ್ರವರಿಯಲ್ಲಿ ಆಕೆಯ ಅಧಿಕೃತ ನಿವಾಸದೆದುರು ಧರಣಿ ಕುಳಿತ್ತಿದ್ದರು.

ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಕಿರಣ್ ಬೇಡಿ ವಾಟ್ಸ್ಯಾಪ್ ಗ್ರೂಪ್ ರಚಿಸಿ ಪೊಲೀಸರಿಗೆ ಆದೇಶ ನೀಡಲು ಆರಂಭಿಸಿದ್ದರಲ್ಲದೆ ಸರಕಾರಿ ಯೋಜನೆಗಳ ತಪಾಸಣೆ ಕೂಡ ನಿಯಮಿತವಾಗಿ  ನಡೆಸುತ್ತಿದ್ದರು. ಮೂವರು ಬಿಜೆಪಿ ಅಭ್ಯರ್ಥಿಗಳನ್ನು ಕೇಂದ್ರದಿಂದ ನಾಮನಿರ್ದೇಶಿತ ಶಾಸಕರನ್ನಾಗಿ ನೇಮಿಸುವ ಮೂಲಕ ಆಕೆ ಪುದುಚ್ಚೇರಿ ಸ್ಪೀಕರ್ ಅವರ ಕೆಂಗಣ್ಣಿಗೂ ಗುರಿಯಾಗಿದ್ದರು.

ಆಕೆಯ ಕ್ರಮವನ್ನು ಸುಪ್ರೀಂ ಕೋರ್ಟ್ ಒಪ್ಪುವ ತನಕ ನಾಮನಿರ್ದೇಶಿತ ಸದಸ್ಯರನ್ನು ಸದನದೊಳಗೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು  ಸ್ಪೀಕರ್ ಪಟ್ಟು ಹಿಡಿದಿದ್ದನ್ನೂ ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News