‘ಲಜ್ಜೆಗೆಟ್ಟ’ ಭಾಷಣಕ್ಕಾಗಿ ಪ್ರಧಾನಿಗೆ 72 ವರ್ಷಗಳ ನಿಷೇಧ ಹೇರಬೇಕು ಎಂದ ಅಖಿಲೇಶ್

Update: 2019-04-30 11:30 GMT

ಲಕ್ನೋ, ಎ.30: ನಲ್ವತ್ತು ಮಂದಿ ಟಿಎಂಸಿ ಶಾಸಕರು ತಮ್ಮ ಜತೆ ಸಂಪರ್ಕದಲ್ಲಿದ್ದಾರೆಂದು ತಮ್ಮ ಚುನಾವಣಾ ಭಾಷಣದಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ತಮ್ಮ ‘ಲಜ್ಜೆಗೆಟ್ಟ’ ಭಾಷಣಕ್ಕಾಗಿ ಪ್ರಧಾನಿಗೆ 72 ವರ್ಷ ನಿಷೇಧ ಹೇರಬೇಕು ಎಂದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ಚುನಾವಣಾ ಆಯೋಗವು ಇತ್ತೀಚೆಗೆ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ 72 ಗಂಟೆಗಳ ಪ್ರಚಾರ ನಿಷೇಧ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

“ವಿಕಾಸ್ ಕೇಳುತ್ತಿದೆ. ನೀವು ಪ್ರಧಾನಿ ಜಿ ಅವರ ಲಜ್ಜೆಗೆಟ್ಟ ಭಾಷಣ ಆಲಿಸಿದ್ದೀರಾ?, ದೇಶದ 125 ಕೋಟಿ ಜನರ ವಿಶ್ವಾಸ ಕಳೆದುಕೊಂಡು ಈಗ ಅವರು 40 ಶಾಸಕರು ನೀಡಿದ್ದಾರೆನ್ನಲಾದ ಪಕ್ಷಾಂತರದ ಅನೈತಿಕ ಭರವಸೆಯ ಮೇಲೆ ಅವಲಂಬಿಸಿದ್ದಾರೆ” ಎಂದು ಅಖಿಲೇಶ್ ಟ್ವೀಟ್ ಮಾಡಿದ್ದಾರೆ.

``ಇದು ಅವರ ಕಾಳ ಧನ ಮನಃಸ್ಥಿತಿಯನ್ನು ಪ್ರತಿಫಲಿಸುತ್ತದೆ. ಅವರನ್ನು ಪ್ರಚಾರದಿಂದ 72 ಗಂಟೆಗಳ ತನಕವಲ್ಲ, 72 ವರ್ಷಗಳ ತನಕ ನಿಷೇಧಿಸಬೇಕು'' ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸೇರಂಪೋರ್ ಲೋಕಸಭಾ  ಕ್ಷೇತ್ರದಲ್ಲಿ  ಹಾಗೂ ಬರಾಕ್ ಪೋರ್ ಕ್ಷೇತ್ರಗಳಲ್ಲಿ ಭಾಷಣ ಮಾಡಿದ ಪ್ರಧಾನಿ ``ದೀದಿ, ದಿಲ್ಲಿಯಂತೂ ದೂರವಿದೆ. ಚುನಾವಣೆ ಫಲಿತಾಂಶ ಹೊರ ಬರುವುದರೊಳಗಾಗಿ ನಿಮ್ಮ ಶಾಸಕರು ನಿಮ್ಮನ್ನು ತೊರಯಲಿದ್ದಾರೆ. ನಿಮ್ಮ 40 ಶಾಸಕರು ನನ್ನ ಜತೆ ಸಂಪರ್ಕದಲ್ಲಿದ್ದಾರೆ ಹಾಗೂ ಬಿಜೆಪಿ ಚುನಾವಣೆ ಗೆಲ್ಲುತ್ತಲ್ಲೇ  ನಿಮ್ಮನ್ನು ತೊರೆಯುತ್ತಾರೆ,''ಎಂದಿದ್ದರು.

ಪ್ರಧಾನಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತೃಣಮೂಲ ಕಾಂಗ್ರೆಸ್ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News