ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸದಿದ್ದುದು ಏಕೆ ಗೊತ್ತೇ?

Update: 2019-05-01 03:43 GMT

ಅಮೇಥಿ, ಮೇ 1: "ಉತ್ತರ ಪ್ರದೇಶದ 41 ಕ್ಷೇತ್ರಗಳ ಹೊಣೆ ಇರುವ ಕಾರಣದಿಂದ ಒಂದೇ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸಲಾಗದು ಎಂಬ ಕಾರಣಕ್ಕೆ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿಲ್ಲ" ಎಂದು ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪಷ್ಟಪಡಿಸಿದರು.

ಚುನಾವಣೆಗೆ ಸ್ಪರ್ಧಿಸದೇ ಇರುವ ತಮ್ಮ ನಿರ್ಧಾರದ ಬಗ್ಗೆ ಮೌನ ಮುರಿದ ಪ್ರಿಯಾಂಕಾ, "ನಾನು ಹಿಂದೇಟು ಹಾಕಿಲ್ಲ. ಪಕ್ಷದ ಹಿರಿಯ ಮುಖಂಡರ ಮತ್ತು ಉತ್ತರ ಪ್ರದೇಶ ಸಹೋದ್ಯೋಗಿಗಳ ಸಲಹೆ ಪಡೆದಾಗ, ನನಗೆ 41 ಕ್ಷೇತ್ರಗಳ ಹೊಣೆಗಾರಿಕೆ ಇದೆ ಎನ್ನುವುದು ಮನದಟ್ಟಾಯಿತು" ಎಂದು ರಾಹುಲ್ ಪರ ಪ್ರಚಾರಸಭೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

"ಪಕ್ಷದ ಎಲ್ಲ ಅಭ್ಯರ್ಥಿಗಳು ತಮ್ಮ ಕ್ಷೇತ್ರಕ್ಕೆ ನಾನು ಭೇಟಿ ನೀಡಬೇಕು ಎಂದು ಬಯಸುತ್ತಾರೆ. ಆದರೆ ನಾನು ಒಂದೇ ಕ್ಷೇತ್ರದ ಮೇಲೆ ಗಮನ ಹರಿಸಿದರೆ ಅವರಿಗೆ ನಿರಾಸೆಯಾಗುತ್ತದೆ. ಆ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೇನೆ" ಎಂದರು.

ಪೂರ್ವ ಉತ್ತರ ಪ್ರದೇಶದ 41 ಕ್ಷೇತ್ರಗಳ ಹೊಣೆಯನ್ನು ಪ್ರಿಯಾಂಕಾ ವಹಿಸಿಕೊಂಡಿದ್ದಾರೆ. 80 ಕ್ಷೇತ್ರಗಳಿರುವ ರಾಜ್ಯದ ಇತರ ಕ್ಷೇತ್ರಗಳ ಉಸ್ತುವಾರಿ ಹೊಣೆ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಹೆಗಲೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News