​ಅತ್ಯಾಚಾರ ಸಾಬೀತಾದರೂ ಆರೋಪಿಗೆ ಜೈಲು ಶಿಕ್ಷೆ ಇಲ್ಲ !

Update: 2019-05-01 03:54 GMT
ಶೇನ್ ಪಿಚೆ

ವಾಷಿಂಗ್ಟನ್, ಮೇ 1: ಹದಿನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಆಕೆಯ ಶಾಲಾ ಬಸ್ಸಿನ ಚಾಲಕ ಅತ್ಯಾಚಾರ ಎಸಗಿರುವುದು ದೃಢಪಟ್ಟಿದ್ದರೂ, ಆರೋಪಿಗೆ ಜೈಲು ಶಿಕ್ಷೆ ವಿಧಿಸದಿರುವ ನ್ಯೂಯಾರ್ಕ್‌ನ ವಾಟರ್‌ಟೌನ್ ಜಿಲ್ಲಾ ನ್ಯಾಯಾಲಯದ ಕ್ರಮ ಅಮೆರಿಕದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಅತ್ಯಾಚಾರ ಆರೋಪಿ ಶಾಲಾ ಬಸ್ಸಿನ ಚಾಲಕ ಶೇನ್ ಪಿಚೆ (26) ಎಂಬಾತನನ್ನು ತಪ್ಪಿತಸ್ಥ ಎಂದು ಎರಡು ತಿಂಗಳ ಹಿಂದೆ ನ್ಯಾಯಾಲಯ ತೀರ್ಮಾನಿಸಿತ್ತು.

ಹದಿನಾಲ್ಕು ವರ್ಷದ ಬಾಲಕಿ ಮೇಲೆ ಮಾರ್ಗಮಧ್ಯದಲ್ಲೇ ಆರೋಪಿ ಅತ್ಯಾಚಾರ ನಡೆಸಿದ್ದ ಎಂದು ನ್ಯಾಯಾಲಯ ಹೇಳಿತ್ತು. ಆದರೆ ಪಿಚೆಗೆ ಜೈಲು ಶಿಕ್ಷೆ ವಿಧಿಸುವ ಬದಲು ಜೆಫರ್‌ಸನ್ ಕೌಂಟಿ ನ್ಯಾಯಾಧೀಶ ಜೇಮ್ಸ್ ಮೆಕ್ಲಸಿ, 10 ವರ್ಷಗಳ ಪ್ರೊಬೇಷನ್ ನೀಡಿ, ನ್ಯೂಯಾರ್ಕ್‌ನ ಲೈಂಗಿಕ ಅಪರಾಧಿಗಳ ರಿಜಿಸ್ಟ್ರಿಯಲ್ಲಿ ಅತ್ಯಂತ ಕನಿಷ್ಠ ಮಟ್ಟದ ಸ್ಥಾನಮಾನದ ಹುದ್ದೆಗೆ ನಿಯೋಜಿಸಿದೆ. ಈ ತೀರ್ಪಿನ ಬಗ್ಗೆ ಸಂತ್ರಸ್ತೆ ಕುಟುಂಬ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

"ನನ್ನ ಮಗುವಿಗೆ ಹಾನಿ ಮಾಡಿದ ಪಿಚೆಗೆ ಜೈಲು ಶಿಕ್ಷೆಯಾಗಬೇಕಿತ್ತು. ನನ್ನ ಮಗಳು ಎಂದೂ ಮರಳಿ ಪಡೆಯಲಾಗದ್ದನ್ನು ನನ್ನ ಮಗುವಿನಿಂದ ಆತ ಕಿತ್ತುಕೊಂಡಿದ್ದಾನೆ. ಆಕೆಯ ಖಿನ್ನತೆ ಹಾಗೂ ಉದ್ವಿಗ್ನತೆಗೆ ಕಾರಣನಾಗಿದ್ದಾನೆ" ಎಂದು ಸಂತ್ರಸ್ತೆಯ ತಾಯಿ ಹೇಳಿಕೆ ನೀಡಿದ್ದಾರೆ.

ಅಮೆರಿಕದಲ್ಲಿ ಲೈಂಗಿಕ ಹಲ್ಲೆ ಪ್ರಕರಣದಲ್ಲಿ ವಿವಾದಾತ್ಮಕ ಶಿಕ್ಷೆಗಳ ಸಾಲಿಗೆ ಈ ಶಿಕ್ಷೆಯೂ ಸೇರಿದ್ದು, ದೇಶದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಮತ್ತು ನ್ಯಾಯಾಲಯ ಅದನ್ನು ಪರಿಗಣಿಸುವ ವಿಧಾನದ ಬಗ್ಗೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಪ್ರಜ್ಞಾಹೀನ ಮಹಿಳೆಯೊಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಸ್ಟನ್‌ಫೋರ್ಡ್ ವಿವಿ ಈಜುಗಾರ ಬ್ರೋಕ್ ಟರ್ನರ್ ಎಂಬಾತನಿಗೆ 2016ರಲ್ಲಿ ಕೇವಲ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದು, ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತೀರ್ಪು ನೀಡಿದ ನ್ಯಾಯಾಧೀಶರನ್ನು ವಜಾಗೊಳಿಸಲಾಗಿತ್ತು.

ಕಳೆದ ಆಗಸ್ಟ್‌ನಲ್ಲಿ ಹೂಸ್ಟನ್ ವೈದ್ಯನೊಬ್ಬ ರೋಗಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲೂ ಆರೋಪಿಗೆ ಕೂಡಾ ಜೈಲು ಶಿಕ್ಷೆ ನೀಡುವ ಬದಲು 10 ವರ್ಷಗಳ ಪ್ರೊಬೆಷನ್ ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News