ಯುಪಿಎ ಸರಕಾರ ಹಲವು ಸರ್ಜಿಕಲ್ ದಾಳಿಗಳನ್ನು ನಡೆಸಿತ್ತು, ಅವುಗಳನ್ನು ಮತ ಗಳಿಕೆಗೆ ಬಳಸಿಕೊಂಡಿಲ್ಲ: ಮನಮೋಹನ್ ಸಿಂಗ್

Update: 2019-05-02 06:06 GMT

ಹೊಸದಿಲ್ಲಿ:  ಹಿಂದಿನ ಯುಪಿಎ ಸರಕಾರ ಹಲವಾರು ಸರ್ಜಿಕಲ್ ದಾಳಿಗಳನ್ನು ನಡೆಸಿತ್ತು ಆದರೆ ಯಾವತ್ತೂ ಅವುಗಳನ್ನು ಮತ ಗಳಿಕೆಗಾಗಿ ಬಳಸಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

'ಹಿಂದುಸ್ತಾನ್ ಟೈಮ್ಸ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸಿಂಗ್ ಅವರು ಆಡಿದ ಈ ಮಾತುಗಳು ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರ ರಾಷ್ಟ್ರೀಯ ಭದ್ರತೆಯನ್ನೇ ಪ್ರಮುಖ ವಿಚಾರವನ್ನಾಗಿಸಿದ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.

"2008ರ ಮುಂಬೈ ದಾಳಿಗಳ ನಂತರ ಮಿಲಿಟರಿ ಕಾರ್ಯಾಚರಣೆಯನ್ನು ಆಯ್ಕೆ ಮಾಡುವ ಬದಲು ನಮ್ಮ ಸರಕಾರ ಪಾಕಿಸ್ತಾನವನ್ನು ಜಗತ್ತಿನಲ್ಲಿ ಏಕಾಂಗಿಯಾಗಿಸಿ ಅದು ಉಗ್ರರ ಕಾರಸ್ಥಾನವೆಂಬ ಅಂಶವನ್ನು ರಾಜತಾಂತ್ರಿಕ ಕ್ರಮಗಳ ಮೂಲಕ ಬಯಲುಗೊಳಿಸಲು ನಿರ್ಧರಿಸಿತ್ತು,'' ಎಂದು ಸಿಂಗ್ ಹೇಳಿದ್ದಾರೆ.

"ಮುಂಬೈ ದಾಳಿಯ 14 ದಿನಗಳೊಳಗಾಗಿ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಚೀನಾ ಒಪ್ಪುವಂತೆ ನಾವು ಮಾಡಿದ್ದೆವು,'' ಎಂದು ಅವರು ವಿವರಿಸಿದ್ದಾರೆ.

"ಮುಂಬೈ ದಾಳಿಯ ರೂವಾರಿ ಹಾಗೂ ಪಾಕಿಸ್ತಾನ ಮೂಲದ ಎಲ್‍ಇಟಿ ಮುಖ್ಯಸ್ಥನ ತಲೆಗೆ ಅಮೆರಿಕಾ 10 ಮಿಲಿಯನ್ ಡಾಲರ್ ನಗದು ಬಹುಮಾನ ಘೋಷಿಸುವಂತೆ ಮಾಡಲು ಕೂಡ ನಾವು ಯಶಸ್ವಿಯಾಗಿದ್ದೆವು,'' ಎಂದು ಸಿಂಗ್ ಹೇಳಿದರು.

ಮುಂಬೈ ದಾಳಿಯ ನಂತರ ಕರಾವಳಿ ಪ್ರದೇಶಗಳ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲು ನ್ಯಾಷನಲ್ ಕೌಂಟರ್ ಟೆರರಿಸಂ ಸೆಂಟರ್ ಪ್ರಸ್ತಾವನೆಗೆ ಆಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ವಿರೋಧಿಸಿದ್ದರು ಎಂದು ಸಿಂಗ್ ಆರೋಪಿಸಿದರು.

ಹಿಂದಿನ ಪ್ರಧಾನಿಗಳಿಗೆ ಹೋಲಿಸಿದಾಗ ನರೇಂದ್ರ ಮೋದಿ ಓರ್ವ ಶಕ್ತಿಶಾಲಿ ಹಾಗೂ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ನಾಯಕ ಎಂದು ಬಿಜೆಪಿ ಬಿಂಬಿಸುತ್ತಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸಿಂಗ್, "ಇಂದಿರಾ ಗಾಂಧಿ ಹಾಗೂ ಲಾಲ್ ಬಹಾದ್ದುರ್ ಶಾಸ್ತ್ರಿ  ಕೂಡ ನಿರ್ಣಾಯಕ ಕ್ರಮಗಳನ್ನು ಕೈಗೊಂಡ ನಾಯಕರಾಗಿದ್ದರು,'' ಎಂದರು. "ಅವರಂತಹ ಮಹಾನ್ ನಾಯಕರು ಹಾಗೂ ಈಗಿನ ಆಡಳಿತದ ಸಣ್ಣತನದ ನಡುವೆ ಯಾವುದೇ ಹೋಲಿಕೆ ಸಾಧ್ಯವಿಲ್ಲ, ಇಂದಿರಾ ಗಾಂಧಿ ಅಥವಾ ಅವರಿಗಿಂತ ಹಿಂದೆ ಸೇವೆ ಸಲ್ಲಿಸಿದ್ದ ಪ್ರಧಾನಿಗಳು ನಮ್ಮ ಸೇನಾ ಪಡೆಗಳ ಕಾರ್ಯಾಚರಣೆಯ ಶ್ರೇಯಸ್ಸನ್ನು  ಸೆಳೆದುಕೊಂಡಿರಲಿಲ್ಲ,'' ಎಂದು ಸಿಂಗ್ ಹೇಳಿದರು.

ಆರ್ಥಿಕ ರಂಗದಲ್ಲಿ ನರೇಂದ್ರ ಮೋದಿ ಸರಕಾರದ ಕ್ಷಮಿಸಲಾರದ  ವೈಫಲ್ಯಗಳನ್ನು ಟೀಕಿಸಿದ ಸಿಂಗ್, ಈಗಿನ ಆಡಳಿತವು "ಸೇನಾ ಪಡೆಗಳ ಪರಾಕ್ರಮದ ಹಿಂದೆ ಅಡಗಿಕೊಳ್ಳಲು ಯತ್ನಿಸುತ್ತಿದೆ,'' ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News