ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ತಿರಸ್ಕಾರ ಹಿನ್ನೆಲೆ: ಡಾ. ಯು.ಪಿ.ಶಿವಾನಂದರಿಂದ ಚು. ಆಯೋಗಕ್ಕೆ ಮೇಲ್ಮನವಿ

Update: 2019-05-02 13:41 GMT

ಪುತ್ತೂರು: 'ದಿಲ್ಲಿಯಿಂದ ಹಳ್ಳಿಗೆ ಆಡಳಿತ ಅಲ್ಲ, ಹಳ್ಳಿಯಿಂದ ದಿಲ್ಲಿಗೆ ಆಡಳಿತ ಆಗಬೇಕು' ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ವಾರಣಾಸಿಯಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಕನ್ನಡಿಗ ಪುತ್ತೂರಿನ ಡಾ. ಯು.ಪಿ. ಶಿವಾನಂದ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಅಮೇಥಿಯಲ್ಲಿ ಅವರು ಅದೇ ಮಾನದಂಡದಲ್ಲಿ ಸಲ್ಲಿಸಿರುವ ನಾಮಪತ್ರ ಸಿಂಧುಗೊಂಡಿದೆ. ಈ ಬಗ್ಗೆ ಡಾ.ಶಿವಾನಂದರು ಮೇಲ್ಮನವಿ ಸಲ್ಲಿಸಿದ್ದಾರೆ.

ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಯು.ಪಿ. ಶಿವಾನಂದ ಅವರು ಕಳೆದ ಸೋಮವಾರ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪರ್ಧಿಸುತ್ತಿರುವ ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದ ತನ್ನ ನಾಮಪತ್ರವನ್ನು ತಿರಸ್ಕೃತಗೊಳಿಸಿರುವ ಚುನಾವಣಾಧಿಕಾರಿಯವರ ಕ್ರಮವನ್ನು ಪ್ರಶ್ನಿಸಿ ಡಾ. ಯು.ಪಿ. ಶಿವಾನಂದ ಅವರು ರಾಷ್ಟ್ರೀಯ ಚುನಾವಣಾ ಆಯೋಗ ಮತ್ತು ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯವರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.

'ತಾನು ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸಲ್ಲಿಸಿರುವ ನಾಮಪತ್ರ ಅಂಗೀಕೃತಗೊಂಡಿದೆ. ಅದೇ ಮಾನದಂಡವನ್ನು ಅನುಸರಿಸಿ ಸಲ್ಲಿಕೆ ಮಾಡಿರುವ ನಾಮಪತ್ರವನ್ನು ವಾರಣಾಸಿ ಕ್ಷೇತ್ರದ ಚುನಾವಣಾಧಿಕಾರಿಯವರು ತಿರಸ್ಕೃತಗೊಳಿಸಿದ್ದಾರೆ. ಚುನಾವಣಾಧಿಕಾರಿಯವರು ನಾಮಪತ್ರ ತಿರಸ್ಕರಿಸಲು ಕೈಗೊಂಡ ಕ್ರಮ ಸರಿಯಾದುದಲ್ಲ, ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ ನ್ಯಾಯ ಒದಗಿಸಿಕೊಡಬೇಕು' ಎಂದು ಮೇಲ್ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬಲಾತ್ಕಾರದ ಬಂದ್, ಭ್ರಷ್ಟಾಚಾರ, ನೇತ್ರಾವತಿ ನದಿ ತಿರುವು ಯೋಜನೆ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿಷಯ ಮತ್ತು ಮಹಾತ್ಮಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯ `ದಿಲ್ಲಿಯಿಂದ ಹಳ್ಳಿಗೆ ಆಡಳಿತ ಅಲ್ಲ, ಹಳ್ಳೆಯಿಂದ ದೆಲ್ಲಿಗೆ ಆಡಳಿತ ಆಗಬೇಕು' ಎಂಬ ವಿಚಾರವನ್ನು ರಾಷ್ಟ್ರದ ಪ್ರಮುಖ ನಾಯಕರಾದ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರಿಗೆ ಮನವರಿಕೆ ಮಾಡುವುದಕ್ಕಾಗಿ ಮತ್ತ ರಾಷ್ಟ್ರ ಮಟ್ಟದಿಂದಲೇ ಈ ವಿಚಾರಗಳು ಅನುಷ್ಠಾನಗೊಳ್ಳಬೇಕೆಂಬ ಕಾರಣಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುವ ವಾರಣಾಸಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ಪರಿಶೀಲನೆ ನಡೆಸಲಾಗಿದ್ದು, ನಾಮಪತ್ರ ಪರಿಶೀಲನೆ ವೇಳೆಯಲ್ಲಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. 

ಮೋದಿಯವರ ವಿರುದ್ದ ಮಾತ್ರವಲ್ಲದೆ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ದವೂ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಯು.ಪಿ. ಶಿವಾನಂದರವರು ಎಪ್ರಿಲ್ 18ರಂದು ನಾಮಪತ್ರ ಸಲ್ಲಿಸಿದ್ದರು. ಅಮೇಥಿಯಲ್ಲಿ ಎ.20ರಂದು ನಾಮಪತ್ರ ಪರೀಶಿಲನೆ ನಡೆದಿದ್ದು ಯು.ಪಿ. ಶಿವಾನಂದರ ನಾಮಪತ್ರ ಸ್ವೀಕೃತಗೊಂಡಿದೆ. ಅಲ್ಲಿ ಡಾ.ಶಿವಾನಂದರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 

102 ನಾಮಪತ್ರಗಳ ಪೈಕಿ 71 ತಿರಸ್ಕೃತ:
ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸಲ್ಲಿಕೆಯಾಗಿದ್ದ 102 ಅಭ್ಯರ್ಥಿಗಳ ನಾಮಪತ್ರಗಳ ಪೈಕಿ ಚುನಾವಣಾಧಿಕಾರಿಯವರು 71 ನಾಮಪತ್ರಗಳನ್ನು ತಿರಸ್ಕೃತಗೊಳಿಸಿದ್ದಾರೆ. ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಸೈನಿಕ ತೇಜ್ ಬಹದ್ದೂರ್, ಪ್ರಮುಖ ಮಠಗಳ ಮಠಾಧೀಶರದು ಸೇರಿದಂತೆ ಸೇರಿದಂತೆ ಒಟ್ಟು 71 ನಾಮಪತ್ರಗಳನ್ನು ಚುನಾವಣಾಧಿಕಾರಿಗಳು ತಿರಸ್ಕೃತಗೊಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News