ವಿಟ್ಲ: ಬ್ಯಾನರ್ ತೆರವುಗೊಳಿಸಿದಕ್ಕೆ ಗ್ರಾಪಂ ಸಿಬ್ಬಂದಿಗೆ ಸಂಘಪರಿವಾರ ಕಾರ್ಯಕರ್ತನಿಂದ ಹಲ್ಲೆ; ದೂರು

Update: 2019-05-02 13:52 GMT
ಯತೀಶ್

ಬಂಟ್ವಾಳ, ಮೇ 2: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ ರಸ್ತೆ ಪಕ್ಕದಲ್ಲಿ ಅಳವಡಿಸಿದ್ದ ಬ್ಯಾನರ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಯೊರ್ವರಿಗೆ ಸಂಘ ಪರಿವಾರದ ಕಾರ್ಯಕರ್ತನೋರ್ವ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿಯಲ್ಲಿ ಗುರುವಾರ ನಡೆದಿದೆ.

ಪೆರುವಾಯಿ ಗ್ರಾಮ ಪಂಚಾಯತ್ ಸಿಬ್ಬಂದಿ ದುಗ್ಗಪ್ಪ ನಾಯ್ಕ ಹಲ್ಲೆಗೊಳಗಾದವರಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆರುವಾಯಿ ಅಶ್ವತನಗರದ ನಿವಾಸಿ, ಬಜರಂಗದಳದ ಪೆರುವಾಯಿ ಘಟಕದ ಮುಖಂಡ ಯತೀಶ್ ಹಲ್ಲೆ ನಡೆಸಿದ ಆರೋಪಿ ಎಂದು ದುಗ್ಗಪ್ಪ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:
ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬದಿಯಾರ್ ಕ್ರಾಸ್ ಬಳಿಯ ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಸಲಾಗಿತ್ತು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣಾ ಆಯೋಗದ ಆದೇಶದಂತೆ ಗ್ರಾಮ ಪಂಚಾಯತ್ ಸಿಬ್ಬಂದಿ ದುಗ್ಗಪ್ಪ ಎಂಬವರು ಬ್ಯಾನರ್ ತೆರವುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಇಲ್ಲಿನ ಹೊಟೇಲ್‍ನ ಬಳಿ ಯತೀಶ್ ಎಂಬಾತನು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದುಗ್ಗಪ್ಪ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News