ಪ್ರಧಾನಿಗೆ ಮಾವಿನ ಹಣ್ಣು ಇಷ್ಟ, ನಿಮಗೆ ಯಾವುದು ಇಷ್ಟ ?

Update: 2019-05-03 05:24 GMT

ಪ್ರಧಾನಿ ನರೇಂದ್ರ ಮೋದಿ ಹಾಗೂ ನಟ ಅಕ್ಷಯ್ ಕುಮಾರ್ ಅವರ ಮಾವಿನ ಹಣ್ಣು ಖ್ಯಾತಿಯ ಸಂದರ್ಶನ ಇನ್ನೂ ದೇಶಾದ್ಯಂತ ಸುದ್ದಿ ಮಾಡುತ್ತಿರುವಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾವಿನ ಹಣ್ಣಿನ ಕುರಿತ ಪ್ರಶ್ನೆ ಹಾಗೂ ಅದಕ್ಕೆ ಉತ್ತರ ಬಂದಿದೆ.  

ರಾಹುಲ್ ಗಾಂಧಿ ಅವರು 'ಇಂಡಿಯಾ ಟುಡೇ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಹಲವು ಗಂಭೀರ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ ಬಳಿಕ ಅವರಲ್ಲಿ ಅವರ ಇಷ್ಟದ ಹಣ್ಣಿನ ಬಗ್ಗೆ ಕೇಳಲಾಗಿದೆ. ಕೇಳುವಾಗ ಪ್ರಧಾನಿಗೆ ಇದೇ ಪ್ರಶ್ನೆ ಕೇಳಿದ್ದರಿಂದ ನಿಮಗೂ ಕೇಳುತ್ತಿದ್ದೇವೆ ಎಂದೂ ಸಂದರ್ಶಕರು ಸೇರಿಸಿದ್ದಾರೆ. 

ಹಾಗಾಗಿ ಪ್ರಶ್ನೆಯನ್ನು ಸರಿಯಾಗಿಯೇ ಬಳಸಿಕೊಂಡ ರಾಹುಲ್ ಗಾಂಧಿ ತಮ್ಮ ಉತ್ತರದ ಮೂಲಕ ಪ್ರಧಾನಿಗೆ ಚಾಟಿ ಬೀಸಿದ್ದಾರೆ. ಮಾವಿನ ಹಣ್ಣಿನ ಹೆಸರಲ್ಲಿ ಪ್ರಧಾನಿಯ ಆಡಳಿತ ವೈಖರಿಗೆ ಚುಚ್ಚುವ ಪ್ರಯತ್ನ ಮಾಡಿದ್ದಾರೆ. 

ಅವರ ಉತ್ತರ ಇಲ್ಲಿದೆ ನೋಡಿ:  
ನಾನು ವಿಪಾಸನ ( ಒಂದು ರೀತಿಯ ಧ್ಯಾನ ) ಮಾಡುತ್ತೇನೆ. ಮನಸ್ಸು ಯಾವ ಹಣ್ಣು ಇಷ್ಟ, ಅಥವಾ ಇಷ್ಟ ಅಲ್ಲ ಎಂಬುದನ್ನು ನಿರ್ಧರಿಸುತ್ತದೆ. ಅದರ ಮೂಲಕ ನೀವು ಯಾವುದೇ ಹಣ್ಣನ್ನು ಇಷ್ಟಪಡಬಹುದು, ಅಥವಾ ಪಡದೇ ಇರಬಹುದು. ಮಾವಿನ ಹಣ್ಣನ್ನು ಇಷ್ಟ ಪಡಲೂಬಹುದು. ಅಥವಾ ಅದನ್ನು ದ್ವೇಷಿಸಲೂಬಹುದು. ಅದೇ ರೀತಿ ನೀವು ಬಡವರನ್ನು ಪ್ರೀತಿಸಬಹುದು ಅಥವಾ ಅವರನ್ನು ದ್ವೇಷಿಸುವ ಆಯ್ಕೆಯೂ ನಿಮಗಿದೆ. ಇದೆಲ್ಲವೂ ನಿಮ್ಮ ಮನಸ್ಸಿನ ಮೂಲಕ ಆಗುತ್ತದೆ. ಮನಸ್ಸೇ ಎಲ್ಲವನ್ನು ನಿರ್ಧರಿಸುತ್ತದೆ. ಪ್ರಾರಂಭದಲ್ಲಿ ನಾನು ಒಬ್ಬ ವ್ಯಕ್ತಿಯನ್ನು ದ್ವೇಷಿಸಬಹುದು, ಆದರೆ ಅವನ ಜೊತೆ ಸ್ವಲ್ಪ ಮಾತಾಡಿ, ಆತನ ದೃಷ್ಟಿಕೋನದಲ್ಲಿ ನೋಡಿದಾಗ, ಹಾಗೇನು ಇಲ್ಲ, ಆತ ಒಳ್ಳೆಯವನು ಎಂದು ನನಗೆ ಗೊತ್ತಾಗಿ ನಾನು ಆತನನ್ನು ಇಷ್ಟಪಡಬಹುದು. ನಿಮ್ಮ ಮೂಲ ಪ್ರಶ್ನೆಗೆ ಉತ್ತರಿಸುವುದಾದರೆ, ನನಗೆ ಮಾವಿನಹಣ್ಣು, ಬಾಳೆಹಣ್ಣು ಇಷ್ಟ. ಮೊದಲು ನನಗೆ ಕ್ಯಾರಟ್ ಕಂಡರೆ ಆಗುತ್ತಿರಲಿಲ್ಲ. ಈಗ ಹಾಗಿಲ್ಲ. ಮೊದಲು ನನಗೆ ಅಸ್ಪರಾಗಸ್ ( ಆಹಾರಕ್ಕೆ ಬಳಸುವ ಒಂದು ರೀತಿಯ ಸಸ್ಯ) ಕೂಡ ಆಗುತ್ತಿರಲಿಲ್ಲ, ಈಗ ನನಗೆ ಅದರ ಬಗ್ಗೆ ಸಮಸ್ಯೆ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News