×
Ad

ತಾನು ಮತ್ತು ಬಿಜೆಪಿ ಸದಸ್ಯರು ಆರೋಪಿಗಳಿಗೆ ಆರ್ಥಿಕ ಸಹಾಯ ನೀಡಿದ್ದೆವು ಎಂದ ಕೇಂದ್ರ ಸಚಿವ ಜಯಂತ್ ಸಿನ್ಹಾ

Update: 2019-05-03 12:49 IST

ಹೊಸದಿಲ್ಲಿ :  ಜಾರ್ಖಂಡ್  ಗುಂಪು ಥಳಿತ ಪ್ರಕರಣದ ಆರೋಪಿಗಳು  ಕಾನೂನು ಸೇವೆ  ಪಡೆಯಲು ಅಗತ್ಯ ಶುಲ್ಕವನ್ನು ಪಾವತಿಸಲು  ತಾವು ಮತ್ತು ಇತರ ಬಿಜೆಪಿ ಸದಸ್ಯರು ಅವರಿಗೆ ಆರ್ಥಿಕ ಸಹಾಯ ನೀಡಿದ್ದಾಗಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಮಾಧ್ಯಮ ಸಂಸ್ಥೆ ಬಿಬಿಸಿಗೆ ತಿಳಿಸಿದ್ದಾರೆ.

ದನಗಳ ವರ್ತಕನಾಗಿದ್ದ ಅಲೀಮುದ್ದೀನ್ ಅನ್ಸಾರಿಯನ್ನು ಜಾರ್ಖಂಡ್ ನಲ್ಲಿ 2017ರಲ್ಲಿ ಥಳಿಸಿದ  ಆರೋಪಿಗಳಿಗೆ ಮಾಲಾರ್ಪಣೆ ಮಾಡಿದ್ದಕ್ಕೆ ತಾವು ಟೀಕೆಗೊಳಗಾದ ಘಟನೆಯ ಕುರಿತಂತೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸುವ ಸಂದರ್ಭ  ಸಿನ್ಹಾ ಮೇಲಿನಂತೆ ಹೇಳಿದ್ದಾರೆ.

ಥಳಿತ ಪ್ರಕರಣವನ್ನು ಖಂಡಿಸಿದ ಹಝಾರಿಬಾಗ್ ಬಿಜೆಪಿ ಸಂಸದರಾಗಿರುವ ಸಿನ್ಹಾ, ಅದೇ ಸಮಯ ಆರೋಪಿಗಳು ನಿರಪರಾಧಿಗಳೆಂದು ಹೇಳಿದರಲ್ಲದೆ ಅರನ್ನು ಅನ್ಯಾಯವಾಗಿ ಒಂದು ವರ್ಷ ಜೈಲಿನಲ್ಲಿರುವಂತೆ ಮಾಡಲಾಯಿತು ಎಂದಿದ್ದಾರೆ.

``ನನಗೆ ಸಂತ್ರಸ್ತ ಅಲೀಮುದ್ದೀನ್ ಅನ್ಸಾರಿ ಹಾಗೂ ಆತನ ವಿಧವೆ ಪತ್ನಿ ಮರಿಯಂ ಖಾತೂನ್ ಬಗ್ಗೆ ಪರಿತಾಪವಿದೆ. ಆದರೆ ನನ್ನ ಮನೆಗೆ ಬಂದ ಜನರು ನಿರಪರಾಧಿಗಳಾಗಿದ್ದರು ಹಾಗೂ ಬಡವರಾಗಿದ್ದರು. ಅದೊಂದು ಖಾಸಗಿ   ಭೇಟಿಯಾಗಿತ್ತು. ಅವರು (ಆರೋಪಿ ಮತ್ತಾತನ ಕುಟುಂಬ) ನನ್ನ ಮನೆಗೆ ಬಂದು ನಾನು ಅವರಿಗೆ ಹೊಸ ಜನ್ಮ ನೀಡಿದ್ದಾಗಿ ಹೇಳಿದರು ಹಾಗೂ ಆತನಿಗೆ ಮಾಲಾರ್ಪಣೆ ಮಾಡುವಂತೆ ನನ್ನನ್ನು ಕೇಳಿಕೊಂಡರು. ನಾನು ಒಪ್ಪಿದೆ,'' ಎಂದರು.

ಆದರೆ ಈ ಘಟನೆಯ ವೀಡಿಯೋವನ್ನು ಯಾರೋ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು ಮಾಧ್ಯಮ ಅದನ್ನು ಹೆಕ್ಕಿಕೊಂಡು ವಿವಾದವೇರ್ಪಡುಂತೆ ಮಾಡಿತು ಎಂದರು.

ತಮ್ಮ ಕಾರ್ಯ ಅನುಚಿತವಲ್ಲ ಎಂದ ಸಿನ್ಹಾ ಕೆಲ ಮಾಧ್ಯಮಗಳು ತಾರತಮ್ಯ ನಿಲುವು ಹೊಂದಿವೆ ಎಂದರು.

``ಸಂತ್ರಸ್ತನಿಗೆ ನ್ಯಾಯ ದೊರಕಬೇಕು, ಅದೇ ಸಮಯ  ಅನಗತ್ಯವಾಗಿ ಒಂದು ವರ್ಷ ಜೈಲು ಶಿಕ್ಷೆಗೊಳಗಾದವರಿಗೂ  ನ್ಯಾಯ ಸಿಗಬೇಕು,'' ಎಂದರು.

ಮೃತನ ಕುಟುಂಬಕ್ಕೆ ಸಹಾಯ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿನ್ಹಾ, ``ಮರಿಯಂ ಖಾತೂನ್ ನನ್ನ ಮನೆಗೆ ಬಂದರೆ ಅಥವಾ ಬೇರ್ಯಾರಾದರೂ ಬಂದು ಸಹಾಯ ಯಾಚಿಸಿದರೆ ಖಂಡಿತವಾಗಿಯೂ ಸಹಾಯ ಮಾಡುತ್ತೇನೆ,'' ಎಂದರು.

 ತರುವಾಯ ಸಂತ್ರಸ್ತನ ಪತ್ನಿ ಖಾತೂನ್ ಮಾತನಾಡುತ್ತಾ ತನ್ನ ಪುತ್ರನಿಗೆ ಉದ್ಯೋಗ ದೊರಕಿಸಿ ಕೊಟ್ಟರೆ ಮಾತ್ರ ಸರಕಾರ ತಮಗೆ ಸಹಾಯ ಮಾಡಲು ಸಿದ್ಧವಿದೆ ಎಂಬುದನ್ನು ತಾವು ನಂಬುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News