ವಿಫಲ ಎಟಿಎಂ ವಹಿವಾಟಿನಿಂದ ಖಾತೆಯಿಂದ ಕಡಿತಗೊಂಡ ಹಣ ಮರುಜಮಾ ಆಗಲು ವಿಳಂಬವಾದರೆ ಪರಿಹಾರ ಪಡೆಯಬಹುದು, ಗೊತ್ತೇ?

Update: 2019-05-03 13:39 GMT

ಹಿಂದಿನ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ಓಂಬುಡ್ಸ್‌ಮನ್ ಕಚೇರಿಗಳಿಗೆ ಬಂದಿದ್ದ ಎಲ್ಲ ಗ್ರಾಹಕ ದೂರುಗಳ ಪೈಕಿ ಸುಮಾರು 16,000 ದೂರುಗಳು ‘ಖಾತೆಯಲ್ಲಿ ಹಣ ಕಡಿತವಾಗಿದೆ,ಆದರೆ ಎಟಿಎಮ್‌ನಲ್ಲಿ ಹಣ ವಿತರಣೆಯಾಗಿಲ್ಲ ’ ಎಂಬ ವಿಷಯಕ್ಕೆ ಸಂಬಂಧಿಸಿದ್ದವು ಎಂದು ಆರ್‌ಬಿಐ ಕಳೆದ ವಾರ ಬಿಡುಗಡೆಗೊಳಿಸಿರುವ ವರದಿಯು ಬೆಟ್ಟುಮಾಡಿದೆ. ಡೆಬಿಟ್ ಕಾರ್ಡ್ ಮತ್ತು ಎಟಿಎಮ್‌ಗೆ ಸಂಬಂಧಿಸಿದ ದೂರುಗಳಲ್ಲಿ ವರ್ಷದಲ್ಲಿ ಶೇ.50ರಷ್ಟು ಏರಿಕೆಯಾಗಿದೆ ಎನ್ನುವುದನ್ನೂ ಮಾಹಿತಿಯು ತೋರಿಸಿದೆ.

ಎಟಿಎಮ್‌ನಿಂದ ನೀವು ಹಣ ಪಡೆಯಲು ಪ್ರಯತ್ನಿಸಿದಾಗ ವಹಿವಾಟು ವಿಫಲಗೊಂಡು ನಿಮ್ಮ ಉಳಿತಾಯ ಖಾತೆಯಲ್ಲಿ ನೀವು ಕೋರಿದ್ದ ಮೊತ್ತ ಕಡಿತವಾಗಿದ್ದರೂ ಯಂತ್ರವು ಹಣವನ್ನು ವಿತರಿಸದಿದ್ದ ಪ್ರಕರಣಗಳಲ್ಲಿ ಪರಿಹಾರ ಪಡೆಯಲು ನಿಮಗೆ ಹಕ್ಕು ಇದೆ. ಆದರೆ ಹೆಚ್ಚಿನವರಿಗೆ ಇದು ಗೊತ್ತಿಲ್ಲ. ಆರ್‌ಬಿಐ ನಿಯಮದಂತೆ ಕಾರ್ಡ್ ನೀಡಿದ ಬ್ಯಾಂಕ್ ಕಡಿತಗೊಂಡ ಹಣವನ್ನು ದೂರು ಸ್ವೀಕರಿಸಿದ ದಿನಾಂಕದಿಂದ ಏಳು ಕೆಲಸದ ದಿನಗಳಲ್ಲಿ ನಿಮ್ಮ ಖಾತೆಗೆ ಮರುಜಮಾ ಮಾಡದಿದ್ದರೆ ವಿಳಂಬಕ್ಕಾಗಿ ದಿನವೊಂದಕ್ಕೆ ನೂರು ರೂ.ಗಳ ಪರಿಹಾರವನ್ನು ಅದು ನೀಡಬೇಕಾಗುತ್ತದೆ.

ಎಟಿಎಮ್‌ನಲ್ಲಿ ನಿಮ್ಮ ಕಾರ್ಡ್ ವಹಿವಾಟು ವಿಫಲಗೊಂಡಿದ್ದರೆ ಮತ್ತು ನಿಮ್ಮ ಖಾತೆಯಿಂದ ಹಣ ಕಡಿತವಾಗಿದ್ದರೆ ಈ ಕುರಿತು ಆರ್‌ಬಿಐನ ಇತರ ನಿಯಮಗಳೂ ನಿಮಗೆ ಗೊತ್ತಿರಬೇಕಾಗುತ್ತದೆ. ಇತರ ಬ್ಯಾಂಕುಗಳ ಎಟಿಎಮ್‌ಗಳು ಮತ್ತು ವೈಟ್ ಲೇಬಲ್ ಎಟಿಎಮ್‌ಗಳಲ್ಲಿಯ ವಿಫಲ ವಹಿವಾಟುಗಳಿಗೂ ಈ ನಿಯಮಗಳು ಅನ್ವಯಿಸುತ್ತವೆ.

►ಸ್ವಂತ ಬ್ಯಾಂಕಿನ ಅಥವಾ ಇತರ ಬ್ಯಾಂಕಿನ ಅಥವಾ ವೈಟ್ ಲೇಬಲ್ ಎಟಿಎಂ,ಹೀಗೆ ಯಾವುದೇ ಯಂತ್ರದಲ್ಲಿ ವಹಿವಾಟು ವಿಫಲಗೊಂಡು ಖಾತೆಯಿಂದ ಹಣ ಕಡಿತವಾದಾಗ ಗ್ರಾಹಕರು ಸಾಧ್ಯವಾದಷ್ಟು ಶೀಘ್ರ ಕಾರ್ಡ್ ವಿತರಿಸಿರುವ ಬ್ಯಾಂಕಿಗೆ ದೂರು ಸಲ್ಲಿಸಬೇಕು.

►ಬ್ಯಾಂಕುಗಳು ಎಟಿಎಂ ಕಿಯೋಸ್ಕ್‌ಗಳಲ್ಲಿ ಸಂಬಂಧಿತ ಅಧಿಕಾರಿಗಳ ಹೆಸರುಗಳು ಮತ್ತು ಸಂಪರ್ಕ ಸಂಖ್ಯೆಗಳು/ಟೋಲ್ ಫ್ರೀ ಫೋನ್ ಸಂಖ್ಯೆಗಳು/ಹೆಲ್ಪ್ ಡೆಸ್ಕ್ ಸಂಖ್ಯೆಗಳನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ವೈಟ್ ಲೇಬಲ್ ಎಟಿಎಂ ಯಂತ್ರಗಳೂ ಗ್ರಾಹಕರು ದೂರು ಸಲ್ಲಿಸಲು ಸಾಧ್ಯವಾಗುವಂತೆ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳು/ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕಾಗುತ್ತದೆ.

►ಎಟಿಎಂ ವಹಿವಾಟು ವಿಫಲಗೊಂಡಿದ್ದರೆ ಮತ್ತು ನಿಮ್ಮ ಖಾತೆಯಿಂದ ಹಣ ಕಡಿತವಾಗಿದ್ದರೆ ನಿಮಗೆ ಕಾರ್ಡ್ ನೀಡಿರುವ ಬ್ಯಾಂಕ್ ದೂರು ಸ್ವೀಕರಿಸಿದ ದಿನಾಂಕದಿಂದ ಏಳು ಕೆಲಸದ ದಿನಗಳಲ್ಲಿ ನಿಮ್ಮ ದೂರನ್ನು ಇತ್ಯರ್ಥ ಗೊಳಿಸಬೇಕಾಗುತ್ತದೆ. ನಿಮ್ಮ ಖಾತೆಗೆ ಹಣ ಏಳು ದಿನಗಳ ಬಳಿಕ ಮರುಜಮಾ ಆದರೆ ವಿಳಂಬಕ್ಕಾಗಿ ಬ್ಯಾಂಕು ನಿಮಗೆ ಪ್ರತಿದಿನ ನೂರು ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಆದರೆ ಗ್ರಾಹಕ ಇಂತಹ ವಿಫಲ ವಹಿವಾಟಿನ 30 ದಿನಗಳಲ್ಲಿ ದೂರು ಸಲ್ಲಿಸಿದರೆ ಮಾತ್ರ ಈ ಪರಿಹಾರವನ್ನು ಪಡೆಯಲು ಅರ್ಹನಾಗುತ್ತಾನೆ.

►ತನ್ನ ಬ್ಯಾಂಕ್ ನಿಗದಿತ ಗಡುವಿನೊಳಗೆ ತನ್ನ ದೂರನ್ನು ಇತ್ಯರ್ಥಗೊಳಿಸದಿದ್ದರೆ ಅಥವಾ ತನಗೆ ತೃಪ್ತಿಯಾಗುವಂತೆ ಇತ್ಯರ್ಥಗೊಳಿಸಿರದಿದ್ದರೆ ಗ್ರಾಹಕ ಬ್ಯಾಂಕಿನಿಂದ ಉತ್ತರ ಸ್ವೀಕರಿಸಿದ 30 ದಿನಗಳಲ್ಲಿ ಅಥವಾ ದೂರನ್ನು ಸಲ್ಲಿಸಿದ 30 ದಿನಗಳಲ್ಲಿ ಬ್ಯಾಂಕಿನಿಂದ ಉತ್ತರ ಸ್ವೀಕರಿಸದಿದ್ದಲ್ಲಿ ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರು ಸಲ್ಲಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News