‘ಅಪಾಯಕಾರಿ’ ವ್ಯಕ್ತಿಗಳ ಖಾತೆಗಳನ್ನು ತೆಗೆದುಹಾಕಿದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್

Update: 2019-05-03 14:22 GMT

ಸಾನ್‌ಫ್ರಾನ್ಸಿಸ್ಕೊ (ಅಮೆರಿಕ), ಮೇ 3: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ಅದರ ಫೋಟೊ-ಮೆಸೇಜಿಂಗ್ ಘಟಕ ಇನ್‌ಸ್ಟಾಗ್ರಾಮ್‌ಗಳು, ಪಿತೂರಿ ಸಿದ್ಧಾಂತವಾದಿ ಅಲೆಕ್ಸ್ ಜೋನ್ಸ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ದೀರ್ಘಾವಧಿ ಸಲಹೆಗಾರರಾಗಿದ್ದ ರೋಜರ್ ಸ್ಟೋನ್ ಸೇರಿದಂತೆ ಹಲವಾರು ಬಲಪಂಥೀಯ ಉಗ್ರವಾದಿಗಳನ್ನು ನಿಷೇಧಿಸಿವೆ. ಈ ವ್ಯಕ್ತಿಗಳು ‘ಅಪಾಯಕಾರಿ’ ಎಂಬುದಾಗಿ ಅವು ಪರಿಗಣಿಸಿವೆ.

ಪದೇ ಪದೇ ಯಹೂದಿ ವಿರೋಧಿ ಹೇಳಿಕೆಗಳನ್ನು ನೀಡಿರುವ ‘ನೇಶನ್ ಆಫ್ ಇಸ್ಲಾಮ್’ ನಾಯಕ ಲೂಯಿಸ್ ಫರಾಖಾನ್‌ರನ್ನೂ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಿಷೇಧಿಸಿದೆ.

‘‘ಹಿಂಸೆ ಮತ್ತು ದ್ವೇಷ ಹರಡುವಿಕೆಯಲ್ಲಿ ತೊಡಗಿರುವ ಅಥವಾ ಅವುಗಳನ್ನು ಉತ್ತೇಜಿಸುವ ವ್ಯಕ್ತಿಗಳು ಮತ್ತು ಸಂಘಟನೆಗಳನ್ನು, ಅವುಗಳ ಸಿದ್ಧಾಂತಗಳನ್ನು ಗಣನೆಗೆ ತೆಗೆದುಕೊಳ್ಳದೆ ನಾವು ಯಾವಾಗಲೂ ನಿಷೇಧಿಸಿದ್ದೇವೆ. ಸಂಭಾವ್ಯ ಉಲ್ಲಂಘಕರನ್ನು ಪರಿಶೀಲನೆ ಮಾಡುವ ಪ್ರಕ್ರಿಯೆ ವಿಸ್ತೃತವಾಗಿದೆ. ಈ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ, ನಾವಿಂದು ಈ ಖಾತೆಗಳನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ’’ ಎಂದು ಫೇಸ್‌ಬುಕ್ ವಕ್ತಾರರೊಬ್ಬರು ಗುರುವಾರ ‘ದಿ ಅಟ್ಲಾಂಟಿಕ್’ ಪತ್ರಿಕೆಗೆ ತಿಳಿಸಿದರು.

ಬಿಳಿಯ ಶ್ರೇಷ್ಠತಾವಾದಿ ಪೌಲ್ ನೆಹ್ಲನ್, ಕಡು ಬಲಪಂಥೀಯ ಪ್ರಚೋದಕ ಮಿಲೊ ಯಿಯಾನೊಪೌಲಸ್, ಕಡು ಬಲಪಂಥೀಯ ಯೂ ಟ್ಯೂಬ್ ವ್ಯಕ್ತಿ ಪೌಲ್ ಜೋಸೆಫ್ ವಾಟ್ಸನ್, ಕಡುಬಲಪಂಥೀಯ ಅಮೆರಿಕನ್ ಪಿತೂರಿ ಸಿದ್ಧಾಂತವಾದಿ ಅಲೆಕ್ಸ್ ಜೋನ್ಸ್ ಹಾಗೂ ಸುಳ್ಳು ಸುದ್ದಿ ವೆಬ್‌ಸೈಟ್ ಇನ್‌ಫೋವಾರ್ಸ್ ಸೇರಿದಂತೆ ಹಲವು ವ್ಯಕ್ತಿಗಳು, ಸಂಘಟನೆಗಳು ಮತ್ತು ವೆಬ್‌ಸೈಟ್‌ಗಳ ಪುಟಗಳನ್ನು ಫೇಸ್‌ಬುಕ್ ರದ್ದುಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News