ಮತದಾನ ಮಾಡದ ಬಗ್ಗೆ ಮೌನ ಮುರಿದ ಕಿಲಾಡಿ ಅಕ್ಷಯ್

Update: 2019-05-03 14:41 GMT

ಮುಂಬೈ: ತಮ್ಮ ಕೆನಡಾ ನಾಗರಿಕತ್ವ ಕುರಿತೂ ಕೊನೆಗೂ ಕಿಲಾಡಿ ಅಕ್ಷಯ್ ಕುಮಾರ್ ಮೌನ ಮುರಿದಿದ್ದಾರೆ. ಹಲವು ದೇಶಭಕ್ತಿ ಕೇಂದ್ರಿತ ಸಿನೆಮಾಗಳನ್ನೇ ಹೆಚ್ಚಾಗಿ ಮಾಡುತ್ತಿರುವ ಅಕ್ಷಯ್ ಕುಮಾರ್ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರ 'ರಾಜಕೀಯೇತರ' ಸಂದರ್ಶನ ಮಾಡಿ ಸುದ್ದಿಯಲ್ಲಿದ್ದರು. 

ಈ ಬಗ್ಗೆ ಅಲ್ಲಲ್ಲಿ ಆಗಾಗ ಚರ್ಚೆ ಕೇಳಿ ಬರುತ್ತಲೇ ಇತ್ತು. ಕಳೆದ ತಿಂಗಳು ದೇಶವಾಸಿಗಳು ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದ್ದರು. ಆದರೆ ಮುಂಬೈಯಲ್ಲಿ ಮತದಾನ ನಡೆದಾಗ ಅವರ ಪತ್ನಿ ಮಾತ್ರ ಮತದಾನ ಮಾಡಿದರು. ಏಕೆಂದರೆ ಅಕ್ಷಯ್ ಕೆನಡಾ ಪ್ರಜೆ ಆಗಿರುವುದರಿಂದ ಇಲ್ಲಿ ಅವರಿಗೆ ಮತದಾನಕ್ಕೆ ಅವಕಾಶವಿಲ್ಲ. 

ಈ ಬಗ್ಗೆ ಪತ್ರಕರ್ತರೊಬ್ಬರು ಅವರನ್ನು ಕೇಳಿದ್ದಕ್ಕೆ ಮುಜುಗರಗೊಂಡ ಅಕ್ಷಯ್  "ಚಲಿಯೆ ಬೇಟಾ (ನಡೀ ಮಗನೆ)" ಎಂದು ಜಾರಿಕೊಂಡಿದ್ದರು. ಈಗ ಈ ವಿಷಯ  ಬಿಸಿ ಚರ್ಚೆಯಾಗುತ್ತಿರುವುದರಿಂದ ಅಕ್ಷಯ್ ಬಾಯಿ ಬಿಟ್ಟಿದ್ದಾರೆ. 

"ನಾನು ಕೆನಡಾ ಪಾಸ್ಪೋರ್ಟ್ ಹೊಂದಿದ್ದೇನೆ ಎಂಬುದನ್ನು ಯಾವತ್ತೂ ಮುಚ್ಚಿಟ್ಟಿಲ್ಲ. ಆದರೆ ಇದು ವೈಯಕ್ತಿಕ ವಿಷಯ. ಇದು ಜನರಿಗೆ ಯಾವುದೇ ರೀತಿಯಲ್ಲಿ ಮಹತ್ವ ಇರುವ ವಿಷಯವಲ್ಲ. ನಾನು ಕಳೆದ ಏಳು ವರ್ಷಗಳಲ್ಲಿ ಒಮ್ಮೆಯೂ ಅಲ್ಲಿಗೆ ಹೋಗಿಲ್ಲ. ನಾನು ಇಲ್ಲೇ ದುಡಿದು ತೆರಿಗೆ ಕಟ್ಟುತ್ತಿದ್ದೇನೆ. ಇನ್ನು ಮುಂದೆಯೂ ದೇಶವನ್ನು ಸದೃಢಗೊಳಿಸಲು ನನ್ನಿಂದ ಸಾಧ್ಯವಿರುವ ಸಣ್ಣ ಪುಟ್ಟ ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸುತ್ತೇನೆ " ಎಂದು ಅಕ್ಷಯ್ ಟ್ವೀಟ್ ಮಾಡಿದ್ದಾರೆ. 

ಆಗಾಗ ದೇಶಭಕ್ತಿ, ಸೇನೆ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದ ಅಕ್ಷಯ್ ಅವರು ಕೆನಡಾ ನಾಗರಿಕತ್ವ ಪಡೆದು ಅಲ್ಲಿನ ಪಾಸ್ಪೋರ್ಟ್ ಕೂಡ ಹೊಂದಿದ್ದಾರೆ. ಈ ಹಿಂದೆ ತಾನು ಕೆನಡಾದ ಗೌರವ ಪ್ರಜೆ ಎಂದು ಅಕ್ಷಯ್ ಹೇಳಿಕೊಂಡಿದ್ದರು. ಆದರೆ ಅವರು ದೇಶದ ಪ್ರಜೆಗಳಿಗೆ ಮಾತ್ರ ನೀಡುವ  ಅಲ್ಲಿನ ಪಾಸ್ಪೋರ್ಟ್ ಪಡೆದಿದ್ದಾರೆ.  ಭಾರತ ಎರಡು ದೇಶಗಳ ನಾಗರಿಕತ್ವ ಪಡೆಯಲು ಅವಕಾಶ ನೀಡುವುದಿಲ್ಲವಾದ್ದರಿಂದ ಕೆನಡಾ ಪಾಸ್ಪೋರ್ಟ್ ಪಡೆಯಲು ಅಕ್ಷಯ್ ಭಾರತದ ನಾಗರಿಕತ್ವ ತ್ಯಜಿಸಿರಬೇಕು. ಹೆಚ್ಚೆಂದರೆ ಅವರು ಭಾರತದ ವಿದೇಶಿ ನಾಗರೀಕ ಅಂದರೆ  OCI(Overseas citizen of India) ಆಗಿರಬೇಕು. Overseas citizen of India ಅಂದರೆ ಭಾರತದಲ್ಲಿ ಪ್ರಯಾಣಿಸಲು, ಕೆಲಸ ಮಾಡಲು ಮತ್ತು ವಾಸಿಸಲು ಅವಕಾಶ ನೀಡುವ ಒಂದು ವಿಶೇಷ ವೀಸಾ, ಅದು ನಾಗರಿಕತ್ವ ಅಲ್ಲ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News