×
Ad

ಅಳಿವಿನಂಚಿನಲ್ಲಿರುವ ಹಕ್ಕಿಗಳ ರಕ್ಷಣೆಗಾಗಿ ಅದಾನಿ ಯೋಜನೆಯನ್ನು ತಿರಸ್ಕರಿಸಿದ ಆಸ್ಟ್ರೇಲಿಯಾ

Update: 2019-05-03 20:21 IST

ಮೆಲ್ಬೋರ್ನ್,ಮೇ 3: ಭಾರತದ ಪ್ರಮುಖ ವಿದ್ಯುತ್ ಉದ್ಯಮಿ ಅದಾನಿ ಅಳಿವಿನಂಚಿನಲ್ಲಿರುವ ಕಪ್ಪು ಕುತ್ತಿಗೆಯ ಫಿಂಚ್ ವರ್ಗದ ಹಕ್ಕಿಗಳ ರಕ್ಷಣೆಗಾಗಿ ರೂಪಿಸಿರುವ ಯೋಜನೆಯನ್ನು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರಕಾರವು ಗುರುವಾರ ತಿರಸ್ಕರಿಸುವ ಮೂಲಕ ಕಂಪನಿಯ ಮಹತ್ವಾಕಾಂಕ್ಷೆಯ ಕಲ್ಲಿದ್ದಲು ಗಣಿ ಯೋಜನೆಗೆ ಭಾರೀ ಹಿನ್ನಡೆಯುಂಟಾಗಿದೆ. ಬಹು ಶತಕೋಟಿ ಡಾಲರ್‌ಗಳ ಗಣಿ ಯೋಜನೆ ಒಪ್ಪಿಗೆಗೆ ಅನುಮೋದಿತ ಷರತ್ತುಗಳನ್ನು ಕಂಪನಿಯ ಪ್ರಸ್ತಾವನೆಗಳು ಪೂರೈಸಿಲ್ಲ ಎಂದು ಸರಕಾರವು ಸ್ಪಷ್ಟಪಡಿಸಿದೆ.

ಪರಿಸರ ಇಲಾಖೆಯ ಈ ನಿರ್ಧಾರದಿಂದಾಗಿ ಈಗಾಗಲೇ ವಿವಾದಕ್ಕೆ ಸಿಲುಕಿರುವ ಅದಾನಿ ಕಂಪನಿಯ ಕಾರ್ಮೈಕೆಲ್ ಕಲ್ಲಿದ್ದಲು ಗಣಿ ಯೋಜನೆಗೆ ಅನಿರ್ದಿಷ್ಟಾವಧಿ ವಿಳಂಬವುಂಟಾಗಲಿದೆ ಎಂದು ಮಾಧ್ಯಮ ವರದಿಗಳು ಶುಕ್ರವಾರ ತಿಳಿಸಿವೆ.

ಕಪ್ಪು ಕುತ್ತಿಗೆಯ ಫಿಂಚ್ ಹಕ್ಕಿಗಳ ನಿರ್ವಹಣೆ ಯೋಜನೆ ಮತ್ತು ಅಂತರ್ಜಲ ರಕ್ಷಣೆ ಯೋಜನೆ ಇವು ಕಲ್ಲಿದ್ದಲು ಗಣಿ ಯೋಜನೆಯನ್ನು ಆರಂಭಿಸುವಲ್ಲಿ ಅದಾನಿ ಕಂಪನಿಯು ಎದುರಿಸುತ್ತಿರುವ ಎರಡು ಪ್ರಮುಖ ತೊಡಕುಗಳಾಗಿವೆ. ಅಂತರ್ಜಲ ರಕ್ಷಣೆ ಯೋಜನೆಯು ಸರಕಾರದ ಪರಿಶೀಲನೆಯಲ್ಲಿದೆ.

ಅದಾನಿ ಆರಂಭಿಸಲು ಉದ್ದೇಶಿಸಿರುವ ಗಣಿ ಪ್ರದೇಶವು ಅಳಿವಿನಂಚಿಲ್ಲಿರುವ ಈ ಹಕ್ಕಿಗಳು ದೊಡ್ಡ ಪ್ರಮಾಣಲ್ಲಿರುವ ಏಕೈಕ ತಾಣವಾಗಿದೆ ಎಂದು ಪರಿಸರ ಇಲಾಖೆ ವಕ್ತಾರರು ತಿಳಿಸಿದರು.

ಕಂಪನಿಯು ಈಗ ಈ ಹಕ್ಕಿಗಳ ರಕ್ಷಣೆಗಾಗಿ ತನ್ನ ಯೋಜನೆಯನ್ನು ಪರಿಷ್ಕರಿಸಿ ಸರಕಾರಕ್ಕೆ ಸಲ್ಲಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News