ಒಪ್ಪಿಗೆ ಪಡೆಯದೆ ವಾಟ್ಸ್ ಆ್ಯಪ್ ಪೇ ವ್ಯವಸ್ಥೆ ಆರಂಭಿಸುವಂತಿಲ್ಲ : ಆರ್‌ಬಿಐ

Update: 2019-05-03 16:35 GMT

ಹೊಸದಿಲ್ಲಿ, ಮೇ 3: ಸಂದೇಶ ಸೇವೆ ನೀಡುವ ವಾಟ್ಸ್ ಆ್ಯಪ್ನಲ್ಲಿ ಸಂಭಾಷಣೆ ಮೂಲಕ ಹಣ ವರ್ಗಾಯಿಸುವ ವ್ಯವಸ್ಥೆ ‘ವಾಟ್ಸ್ ಆ್ಯಪ್ ಪೇ’ಯನ್ನು ತನ್ನ ಒಪ್ಪಿಗೆ ಪಡೆಯದೆ ನಿರ್ವಹಿಸುವಂತಿಲ್ಲ ಮತ್ತು ಇದುವರೆಗೆ ಈ ರೀತಿಯ ಒಪ್ಪಿಗೆ ನೀಡಿಲ್ಲ ಎಂದು ರಿಸರ್ವ್ ಬ್ಯಾಂಕ್ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಆರ್‌ಬಿಐ ಹೊರಡಿಸಿರುವ ಸುತ್ತೋಲೆಯಲ್ಲಿ ವಿವರಿಸಲಾಗಿರುವ ಡೇಟಾ ಸ್ಥಳೀಕರಣ ನಿಯಮವನ್ನು ವಾಟ್ಸ್ ಆ್ಯಪ್ ಪೇ ವ್ಯವಸ್ಥೆ ಅನುಸರಿಸಿಲ್ಲ ಎಂದು ‘ಸೆಂಟರ್ ಫಾರ್ ಅಕೌಂಟೆಬಿಲಿಟಿ ಆ್ಯಂಡ್ ಸಿಸ್ಟಮೆಟಿಕ್ ಚೇಂಜ್(ಸಿಎಎಸ್‌ಸಿ)’ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಹೊರಡಿಸಿರುವ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ ಸಂದರ್ಭ ಆರ್‌ಬಿಐ ಈ ಹೇಳಿಕೆ ನೀಡಿದೆ.

ವಿದೇಶಿ ಸಂಸ್ಥೆಯಾಗಿರುವ ವಾಟ್ಸ್ ಆ್ಯಪ್ಗೆ ಭಾರತದಲ್ಲಿ ಕಚೇರಿ ಅಥವಾ ಸರ್ವರ್‌ಗಳಿಲ್ಲ. ಪಾವತಿ ಸೇವೆ ಆರಂಭಿಸಬೇಕಿದ್ದರೆ ವಾಟ್ಸ್ ಆ್ಯಪ್ ಭಾರತದಲ್ಲಿ ಕಚೇರಿಯನ್ನು ಹೊಂದಿರಬೇಕು . ಅಲ್ಲದೆ ಭಾರತದ ಬಳಕೆದಾರರಿಗೆ ಸಂಬಂಧಿಸಿ ಇಲ್ಲಿ ದೂರು ಅಧಿಕಾರಿ(ಗ್ರಿವೆನ್ಸ್ ಆಫೀಸರ್)ಯನ್ನೂ ಸಂಸ್ಥೆ ಹೊಂದಿರಬೇಕು . ಈ ನಿಯಮ ಉಲ್ಲಂಘಿಸಿದ್ದರೂ ಅವರಿಗೆ ಯಾವುದೇ ಪರಿಶೀಲನೆ ನಡೆಸದೆ ಪಾವತಿ ಮತ್ತಿತರ ಸೇವೆಯನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ ಎಂದು ಸಿಎಎಸ್‌ಸಿ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ. ಡೇಟಾ ಸ್ಥಳೀಕರಣ ನಿಯಮದ ಪ್ರಕಾರ ಪಾವತಿ ಸಂಬಂಧಿಸಿದ ಡೇಟಾಗಳನ್ನು ಭಾರತದೊಳಗೆ ಮಾತ್ರ ಸಂಗ್ರಹಿಸಿಡಬೇಕು. ಫೇಸ್‌ಬುಕ್ ಮಾಲಕತ್ವದ ವಾಟ್ಸ್ ಆ್ಯಪ್ಗೆ ಭಾರತದಲ್ಲಿ 200 ಮಿಲಿಯನ್‌ಗೂ ಅಧಿಕ ಬಳಕೆದಾರರಿದ್ದಾರೆ ಎನ್ನಲಾಗಿದೆ. ನೀವು ನಿಯಮ ಪಾಲಿಸುತ್ತಿಲ್ಲ ಎಂದು ಆರ್‌ಬಿಐ ಹೇಳುತ್ತಿದೆ . ಈ ಕುರಿತು ವಿವರಣೆ ನೀಡಿ ಎಂದು ಕಪಿಲ್ ಸಿಬಲ್ ಮತ್ತು ಅರವಿಂದ್ ದಾತಾರ್‌ರನ್ನು ಒಳಗೊಂಡಿರುವ ವಾಟ್ಸ್ ಆ್ಯಪ್ನ ಕಾನೂನು ತಂಡಕ್ಕೆ ನ್ಯಾ. ರೋಹಿಂಟನ್ ನಾರಿಮನ್ ಮತ್ತು ವಿನೀತ್ ಸರನ್ ಅವರಿದ್ದ ನ್ಯಾಯಪೀಠ ಸೂಚಿಸಿತು. ಇದಕ್ಕೆ ಉತ್ತರಿಸಿದ ಸಿಬಲ್, ಡೇಟಾ ಸರ್ವರ್‌ಗಳನ್ನು ಭಾರತದ ಹೊರಗೆ ಸ್ಥಾಪಿಸಲಾಗಿದ್ದು ಈ ವ್ಯವಸ್ಥೆ ಈಗಿನ್ನೂ ಪರೀಕ್ಷಾ ಹಂತದಲ್ಲಿದೆ. ಜುಲೈ ವೇಳೆಗೆ ಅಂತಿಮಗೊಳ್ಳಬಹುದು ಎಂದು ತಿಳಿಸಿದಾಗ , ನಮ್ಮ ಕೈಗಳು ಸಾಕಷ್ಟು ಉದ್ದವಿದೆ ಎಂಬುದನ್ನು ಮರೆಯಬೇಡಿ ಎಂದು ಸುಪ್ರೀಂಕೋರ್ಟ್ ಎಚ್ಚರಿಸಿತು ಹಾಗೂ ಮುಂದಿನ ವಿಚಾರಣೆಯನ್ನು ಜುಲೈಗೆ ನಿಗದಿಗೊಳಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News