×
Ad

ರದ್ದುಗೊಳಿಸಿದ ಬಳಿಕವೂ ಕೃಷಿ ಕಲ್ಯಾಣ ಸೆಸ್‌ನಿಂದ 1,300 ಕೋಟಿ ಸಂಗ್ರಹಿಸಿದ ಕೇಂದ್ರ ಸರಕಾರ

Update: 2019-05-03 22:10 IST

ಹೊಸದಿಲ್ಲಿ, ಮೇ 3: ಕೃಷಿ ಕಲ್ಯಾಣ ಸೆಸ್(ಕೆಕೆಸಿ) ರದ್ದುಗೊಳಿಸಿದ್ದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 1,300 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಯಿಂದ ತಿಳಿದುಬಂದಿದೆ. ಜಿಎಸ್‌ಟಿ ಅನುಷ್ಠಾನಗೊಳಿಸಿದ ಬಳಿಕ ವಿತ್ತ ಸಚಿವಾಲಯ ಕ್ರಮೇಣ ಹಲವಾರು ಉಪಕರಗಳನ್ನು (ಸೆಸ್) ರದ್ದುಗೊಳಿಸಿದ್ದು 2017ರ ಜುಲೈ 1ರಂದು ಕೃಷಿ ಕಲ್ಯಾಣ ಸೆಸ್ ಅನ್ನು ರದ್ದುಗೊಳಿಸಲಾಗಿದೆ. ಆದರೂ, ಕೃಷಿ ಕಲ್ಯಾಣ ಸೆಸ್‌ನಡಿ 1,340.55 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಸಲ್ಲಿಸಿರುವ ಅರ್ಜಿಗೆ ವಿತ್ತ ಸಚಿವಾಲಯದ ಕಂದಾಯ ವಿಭಾಗದ ಪ್ರಧಾನ ನಿರ್ದೇಶಕರು ನೀಡಿರುವ ಉತ್ತರದಲ್ಲಿ ತಿಳಿಸಲಾಗಿದೆ. ಅಸ್ತಿತ್ವದಲ್ಲಿರದ ತೆರಿಗೆಯ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿರುವ ಪ್ರಕ್ರಿಯೆ ಸರಕಾರದ ಉದ್ದೇಶದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅರ್ಜಿದಾರರು ಪ್ರತಿಕ್ರಿಯಿಸಿದ್ದಾರೆ. 2017ರ ಜುಲೈ 1ರಿಂದ ಸ್ವಚ್ಛ ಭಾರತ್ ಸೆಸ್ ಹಾಗೂ ಕೆಕೆಸಿಯನ್ನು ರದ್ದುಗೊಳಿಸಲಾಗಿದೆ ಎಂದು 2018ರ ಮಾರ್ಚ್ 6ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿತ್ತ ಇಲಾಖೆಯ ಸಹಾಯಕ ಸಚಿವ ಶಿವಪ್ರತಾಪ್ ಶುಕ್ಲ ತಿಳಿಸಿದ್ದರು. ಜೊತೆಗೆ, 2017ರ ಜೂನ್ 7ರಂದು ವಿತ್ತ ಇಲಾಖೆ ಹೊರಡಿಸಿದ್ದ ಪತ್ರಿಕಾ ಹೇಳಿಕೆಯಲ್ಲಿ , ಜಿಎಸ್‌ಟಿ ಜಾರಿಗೊಳಿಸುವ ಸಲುವಾಗಿ ಕೆಕೆಸಿ ಸೇರಿದಂತೆ ಹಲವು ಉಪತೆರಿಗೆಗಳನ್ನು 2017ರ ಜುಲೈ 1ರಿಂದ ರದ್ದುಗೊಳಿಸುವುದಾಗಿ ತಿಳಿಸಲಾಗಿತ್ತು. ಆದರೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಉತ್ತರದಲ್ಲಿ 2017ರ ಜುಲೈ 1ರಿಂದ 2019ರ ಜನವರಿವರೆಗಿನ ಅವಧಿಯಲ್ಲಿ ಕೆಕೆಸಿಯಡಿ 1,340.55 ಕೋಟಿ ರೂ. ಸಂಗ್ರಹಿಸಿರುವುದು ತಿಳಿದು ಬಂದಿದೆ.

2016ರಲ್ಲಿ ಜಾರಿಗೊಳಿಸಲಾಗಿರುವ ಕೆಕೆಸಿಯಡಿ ತೆರಿಗೆಗೆ ಅರ್ಹವಾಗಿರುವ ಎಲ್ಲಾ ಸೇವೆಗಳ ಮೇಲೆ 0.5% ಕೃಷಿ ಕಲ್ಯಾಣ ಮೇಲ್‌ತೆರಿಗೆ ಸಂಗ್ರಹಿಸಲಾಗುತ್ತದೆ. ಕೃಷಿ ಸುಧಾರಣೆಯ ನಿಟ್ಟಿನಲ್ಲಿ ನಡೆಸುವ ಉಪಕ್ರಮಗಳಿಗೆ ಕೆಕೆಸಿಯ ಹಣವನ್ನು ಬಳಸಲು ಯೋಜನೆ ರೂಪಿಸಲಾಗಿತ್ತು. 2016ರಿಂದ ಕೆಕೆಸಿಯಡಿ ಒಟ್ಟು 10,502.34 ಕೋಟಿ ರೂ. ಸಂಗ್ರಹಿಸಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಉತ್ತರದಿಂದ ತಿಳಿದು ಬಂದಿದೆ. 2016-17ರಲ್ಲಿ 7,572.08 ಕೋಟಿ ರೂ, 2017-18ರಲ್ಲಿ 2,779.79 ಕೋಟಿ ರೂ, 2018-19ರಲ್ಲಿ (2019ರ ಜನವರಿವರೆಗೆ) 150.48 ಕೋಟಿ ರೂ. ಸಂಗ್ರಹಿಸಲಾಗಿದೆ. ಇದೇ ರೀತಿಯ ತೆರಿಗೆಯನ್ನು ಸ್ವಚ್ಛ ಭಾರತ ಸೆಸ್‌ನ ಹೆಸರಿನಲ್ಲಿ ಸಂಗ್ರಹಿಸಲಾಗುತ್ತಿದ್ದು (ಇದನ್ನೂ ರದ್ದುಗೊಳಿಸಲಾಗಿದೆ), ರದ್ದಾದ ಬಳಿಕವೂ ಈ ವಿಭಾಗದಡಿ 2,100 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಅಸ್ತಿತ್ವದಲ್ಲಿ ಇರದ ಮೇಲ್‌ತೆರಿಗೆಯ ಹೆಸರಿನಲ್ಲಿ ಸಂಗ್ರಹಿಸಿರುವ ಹಣವನ್ನು ಹೇಗೆ ವಿನಿಯೋಗಿಸಲಾಗುತ್ತದೆ ಎಂಬ ಬಗ್ಗೆ ಸರಕಾರ ಯಾವುದೇ ಮಾಹಿತಿ ನೀಡದಿರುವುದು ಕುತೂಹಲಕಾರಿಯಾಗಿದೆ.

ಕೆಕೆಸಿ ಹಣ ಹೇಗೆ ಖರ್ಚು ಮಾಡಲಾಗಿದೆ ?

 ಕೆಕೆಸಿಯಡಿ 2016-17 ಮತ್ತು 2017-18ರಲ್ಲಿ ಸಂಗ್ರಹಿಸಲಾಗಿರುವ ಹಣವನ್ನು ಸರಕಾರದ ಬೆಳೆ ವಿಮೆ ಯೋಜನೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ(ಪಿಎಂಎಫ್‌ಬಿವೈ) ಹಾಗೂ ರೈತರ ಸಾಲಕ್ಕೆ ಸಬ್ಸಿಡಿ ನೀಡಲು ವಿನಿಯೋಗಿಸಲಾಗಿದೆ ಎಂದು ಕೃಷಿ ಇಲಾಖೆ ಹೇಳಿಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ಉತ್ತರಿಸಿದ್ದ ಕೃಷಿ ಇಲಾಖೆ, 2016-17 ಮತ್ತು 2017-18ರ ಮಧ್ಯೆ ಪಿಎಂಎಫ್‌ಬಿವೈಗೆ 12,512.67 ಕೋಟಿ ರೂ. ಬಳಸಲಾಗಿದೆ ಎಂದು ತಿಳಿಸಿದೆ. ಆದರೆ ಈ ಅವಧಿಯಲ್ಲಿ ಸಂಗ್ರಹವಾಗಿರುವ ತೆರಿಗೆ 10,502.34 ಕೋಟಿ ರೂ. ಮಾತ್ರ ಎಂಬುದು ಗಮನಾರ್ಹವಾಗಿದೆ. ಅಲ್ಲದೆ, ರದ್ದುಗೊಂಡ ಬಳಿಕವೂ ಕೆಕೆಸಿಯಡಿ ಸಂಗ್ರಹಿಸಿದ ಹಣವನ್ನು ಹೇಗೆ ವೆಚ್ಚ ಮಾಡಲಾಗಿದೆ ಎಂಬ ಕುರಿತು ಕೃಷಿ ಇಲಾಖೆ ಯಾವ ಮಾಹಿತಿಯನ್ನೂ ಒದಗಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News