ಪಶ್ಚಿಮ ಬಂಗಾಳ ತಲುಪಿದ 'ಫನಿ'; ಬಿರುಗಾಳಿ ಸಹಿತ ಭಾರೀ ಮಳೆ

Update: 2019-05-04 03:32 GMT

ಕೊಲ್ಕತ್ತಾ, ಮೇ 4: ಒಡಿಶಾದಲ್ಲಿ ವ್ಯಾಪಕ ಹಾನಿ ಮಾಡಿರುವ 'ಫನಿ' ಚಂಡಮಾರುತ ಇಂದು ಮುಂಜಾನೆ ಖರಗಪುರ ದಾಟುವ ಮೂಲಕ ಪಶ್ಚಿಮ ಬಂಗಾಳವನ್ನು ತಲುಪಿದೆ. ಚಂಡಮಾರುತದಿಂದಾಗಿ ರಾಜಧಾನಿ ಕೊಲ್ಕತ್ತಾ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಆದರೆ ಇದುವರೆಗೆ ಯಾವುದೇ ಪ್ರಾಣಹಾನಿ, ಯಾರಿಗೂ ಗಾಯಗಳಾಗಿರುವುದು ವರದಿಯಾಗಿಲ್ಲ.

ಇತ್ತೀಚಿನ ವರ್ಷಗಳಲ್ಲೇ ಹಿಂದೂ ಮಹಾಸಾಗರದಿಂದ ಹುಟ್ಟಿಕೊಂಡ ಅತಿದೊಡ್ಡ ಚಂಡಮಾರುತ ಎನ್ನಲಾದ ಫನಿ ಶುಕ್ರವಾರ ಪುರಿ ನಗರವನ್ನು ಅಪ್ಪಳಿಸಿತ್ತು. 10 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದ ಕಾರಣದಿಂದ ಸಾವುನೋವಿನ ಪ್ರಮಾಣ ಕಡಿಮೆಯಾಗಿತ್ತು. ಆದಾಗ್ಯೂ ಚಂಡಮಾರುತದ ಆರ್ಭಟಕ್ಕೆ ಎಂಟು ಮಂದಿ ಬಲಿಯಾಗಿದ್ದಾರೆ. ಶುಕ್ರವಾರ ರಾತ್ರಿ ಬರಿಪಾಡ ಬಳಿ ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಚಂಡಮಾರುತ ಈಶಾನ್ಯ ದಿಕ್ಕಿನಲ್ಲಿ ಗಂಟೆಗೆ 90 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಈ ಮಧ್ಯೆ ಭಾರತೀಯ ನೌಕಾಪಡೆಯ ಡೈವಿಂಗ್ ತಂಡ ಮಣಿಪುರದ ಇಂಫಾಲ ನದಿಯಿಂದ ಎರಡು ಮಂದಿಯ ಮೃತದೇಹಗಳನ್ನು ಮೇಲೆತ್ತಿದೆ. ಮಾಪಿತೆಲ್ ಜಲಾಶಯದ ಬಳಿ ಒಂದೇ ಕುಟುಂಬದ ಮೂರು ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಒಂದು ಮೃತದೇಹವನ್ನು ಗುರುವಾರ ಪತ್ತೆ ಮಾಡಲಾಗಿತ್ತು. ಉಳಿದ ಎರಡು ಮೃತದೇಹಗಳನ್ನು ಇದೀಗ ಪತ್ತೆ ಮಾಡಲಾಗಿದೆ. ಫನಿ ಚಂಡಮಾರುತದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲೂ ವ್ಯಾಪಕ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ 15 ಸಾವಿರ ಮಂದಿ ಹಾಗೂ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ 20 ಸಾವಿರ ಮಂದಿ ಪರಿಹಾರ ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ. ಮುಂಜಾನೆ ಕೊಲ್ಕತ್ತಾ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ್ದರೂ, ರೈಲು ಹಳಿಗಳ ಮೇಲೆ ಹಲವೆಡೆ ಮರಗಳು ಬಿದ್ದಿರುವುದರಿಂದ ರೈಲು ಸಂಚಾರ ಆರಂಭವಾಗಿಲ್ಲ.

ಒಡಿಶಾದ ಬಾಲ್ಸೋರ್ ಮೂಲಕ ಮಧ್ಯರಾತ್ರಿ 12:30ರ ವೇಳೆಗೆ ಫನಿ ಪಶ್ಚಿಮ ಬಂಗಾಳವನ್ನು ತಲುಪಿದೆ. 185 ಕಿಲೋಮೀಟರ್ ವೇಗ ಪಡೆದಿದ್ದ ಫನಿಯ ವೇಗ ಈಗ 70-80 ಕಿಲೋಮೀಟರ್‌ಗೆ ತಗ್ಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಉಪ ಮಹಾನಿರ್ದೇಶಕ ಸಂಜೀವ್ ಬಂಡೋಪಾಧ್ಯಾಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News