ಅಖಿಲೇಶ್ ಜತೆಗೆ ‘ಆದಿತ್ಯನಾಥ್’!: ಕುತೂಹಲ ಸೃಷ್ಟಿಸಿದ ಫೋಟೊ

Update: 2019-05-04 13:49 GMT

ಲಕ್ನೋ, ಮೇ 4: ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಶನಿವಾರ ಟ್ವಿಟರ್ ನಲ್ಲಿ ತಮ್ಮೊಂದಿಗೆ ಕೇಸರಿ ವಸ್ತ್ರಧಾರಿ, ಸಿಎಂ ಆದಿತ್ಯನಾಥ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರಿರುವ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಒಂದು ಚಿತ್ರದಲ್ಲಿ ಅಖಿಲೇಶ್ ಹಾಗೂ ಕೇಸರಿ ವಸ್ತ್ರಧಾರಿ ವ್ಯಕ್ತಿ ಹೆಲಿಕಾಪ್ಟರ್ ನತ್ತ ನಡೆಯುತ್ತಿರುವುದು ಕಾಣಿಸುತ್ತದೆ. ಎರಡೂ ಚಿತ್ರಗಳಲ್ಲಿ ಕ್ಯಾಮರಾ ಇಬ್ಬರ ಮುಖ ಕಾಣಿಸದಂತೆ ಹಿಂದಿನಿಂದ ಚಿತ್ರಿಸಿದೆ.

ಈ ಚಿತ್ರಗಳ ಜತೆಗೆ ಅಖಿಲೇಶ್ ಆವರು ಮಾಡಿರುವ ಟ್ವೀಟ್ ಕೂಡ ಅಚ್ಚರಿ ಮೂಡಿಸುತ್ತದೆ. “ನಮಗೆ ನಕಲಿ ದೇವರನ್ನು ಸೃಷ್ಟಿಸಲು ಸಾಧ್ಯವಿಲ್ಲ, ಆದರೆ ನಾವೊಬ್ಬ `ಬಾಬಾ'ನನ್ನು ತಂದಿದ್ದೇವೆ. ನಮ್ಮೊಂದಿಗೆ ಗೋರಖ್ ಪುರ್ ಬಿಟ್ಟು ತೆರಳುತ್ತಿರುವ ಅವರು ಇಡೀ ರಾಜ್ಯದುದ್ದಕ್ಕೂ ಸರಕಾರದ ಬಗೆಗಿನ ಸತ್ಯ ಹೇಳುತ್ತಾರೆ” ಎಂದು ಅಖಿಲೇಶ್  ಬರೆದಿದ್ದಾರೆ.

ಈ ಟ್ವೀಟ್ ನಲ್ಲಿ `ನಕಲಿ ಭಗವಾನ್ ಹಾಗೂ ಗೋರಖಪುರ್' ಪದಗಳು ಪ್ರಮುಖವಾಗಿವೆ. ನಕಲಿ ಭಗವಾನ್ ಪದದ ಮೂಲಕ ಪ್ರಧಾನಿ ಮೋದಿಯನ್ನು ಅಣಕಿಸಲಾಗಿದ್ದರೆ,  ಗೋರಖಪುರ್ ಉಲ್ಲೇಖ ಮೂಲಕ ಆದಿತ್ಯನಾಥ್ ಅವರ ಸಂಸದೀಯ ಕ್ಷೇತ್ರದ ಹೆಸರೆತ್ತಲಾಗಿದೆ. ಸಿಎಂ ಆಗುವ ಮೊದಲು ಆದಿತ್ಯನಾಥ್ ಗೋರಖಪುರ್ ಕ್ಷೇತ್ರವನ್ನು ನಾಲ್ಕು ಅವಧಿಗಳಿಗೆ ಪ್ರತಿನಿಧಿಸಿದ್ದರು.

ಕಳೆದ ಮೇ ತಿಂಗಳಲ್ಲಿ ಇಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸಮಾಜವಾದಿ ಪಕ್ಷದ ಅಭ್ಯರ್ಥಿ ಬಿಎಸ್‍ಪಿ ಸಹಾಯದಿಂದ ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News