ಭಾರತ ‘ಅಘೋಷಿತ ಹಿಂದು ರಾಷ್ಟ್ರ’ವಾಗಿ ಬಿಟ್ಟಿದೆ: ಆಝಂ ಖಾನ್

Update: 2019-05-04 13:53 GMT

ರಾಮಪುರ್, ಮೇ 4: ಈ  ಚುನಾವಣೆಯಲ್ಲಿರುವ ಒಂದೇ ವಿಷಯ ರಾಷ್ಟ್ರವಾದದ್ದಾಗಿದೆ. ಪ್ರಧಾನಿ ಮತ್ತು ಇತರ ಬಿಜೆಪಿ ನಾಯಕರಾಡುವ ಭಾಷೆ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿದೆ. ಆದುದರಿಂದ ಭಾರತ ಒಂದು ಅಘೋಷಿತ ಹಿಂದು ರಾಷ್ಟ್ರವಾಗಿ ಬಿಟ್ಟಿದೆ'' ಎಂದು  ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಹೇಳಿದ್ದಾರೆ.

“ಹಣದುಬ್ಬರ, ನಿರುದ್ಯೋಗ, ಜಿಎಸ್‍ಟಿ, ಅಮಾನ್ಯೀಕರಣ, ರೈತರ ಆತ್ಮಹತ್ಯೆಗಳು ಬಿಜೆಪಿ ಆಡಳಿತದಲ್ಲಿ ಸೈನಿಕರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಮುಂತದ ಪ್ರಮುಖ ವಿಚಾರಗಳನ್ನು ಲೋಕಸಭಾ ಚುನಾವಣೆ ವೇಳೆ ಚರ್ಚಿಸಲಾಗುತ್ತಿಲ್ಲ” ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಖೇದ ವ್ಯಕ್ತಪಡಿಸಿದರು.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೊಲೆ ಆರೋಪಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಅವರಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಖಾನ್ ಪ್ರಶ್ನಿಸಿದರು. “ಶಾ ಅವರ ವಿರುದ್ಧ ಅಂತಹ ಆರೋಪವಿದ್ದರೆ ಅದು ದುರದೃಷ್ಟಕರ” ಎಂದರು.

“ಚುನಾವಣೆ ಸಂದರ್ಭ ನನ್ನನ್ನು ಕೊಲ್ಲಲು ಯತ್ನಗಳು ನಡೆದಿದ್ದವು. ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಈ ಷಡ್ಯಂತ್ರ ರಚಿಸಿದ್ದರು” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ವಿವಾದಾತ್ಮಕ ಹೇಳಿಕೆಗೆ ತಮ್ಮ ವಿರುದ್ಧ ಪ್ರಚಾರ ನಿಷೇಧ ಹೇರಿದ್ದ ಚುನಾವಣಾ ಆಯೋಗದ ಕ್ರಮದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಹುದೆಂದು ಆಯೋಗಕ್ಕೆ ತಿಳಿದಿದ್ದರಿಂದ ಇಡೀ ಪ್ರಚಾರಾವಧಿಗೆ ನನ್ನ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಈ ಬಾರಿ ಬಿಜೆಪಿ ಗೆಲ್ಲಲಿಕ್ಕಿಲ್ಲ ಎಂದು ಅದಕ್ಕೆ ತಿಳಿದಿರುವುದರಿಂದ ಅಲ್ಪಾವಧಿಗೆ ಪ್ರಚಾರ ನಿಷೇಧ ಹೇರಲಾಯಿತು'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News