ರಫೇಲ್ ವಿಚಾರದಲ್ಲಿ ಪ್ರಧಾನಿ ಕಚೇರಿಯ ಮೇಲ್ವಿಚಾರಣೆ ಹಸ್ತಕ್ಷೇಪವಲ್ಲ: ಕೇಂದ್ರ

Update: 2019-05-04 16:00 GMT

ಹೊಸದಿಲ್ಲಿ, ಮೇ 4: ಸುಪ್ರೀಂಕೋರ್ಟ್‌ನಲ್ಲಿ ರಫೇಲ್ ಪ್ರಕರಣದ ಮರುವಿಚಾರಣೆ ನಡೆಯಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಗೆ ವಿರೋಧ ಸೂಚಿಸಿ ಕೇಂದ್ರ ಸರಕಾರ ಶನಿವಾರ ಹೊಸ ಪ್ರಮಾಣಪತ್ರ ಸಲ್ಲಿಸಿದೆ. ಈ ಪ್ರಕರಣದಲ್ಲಿ ಅರ್ಜಿದಾರರು ಕೇವಲ ಅನುಮಾನದ ಮೇಲೆ ಆರೋಪ ಹೊರಿಸಿದ್ದು ಪ್ರಕರಣಕ್ಕೆ ಸಂಬಂಧವಿಲ್ಲದ ವಿಷಯಗಳನ್ನು ಎತ್ತಿದ್ದಾರೆ . ವ್ಯಕ್ತಿಗಳ ಗ್ರಹಿಕೆಯ ಆಧಾರದಲ್ಲಿ ಪ್ರಕರಣದ ತನಿಖೆ ಸಾಧ್ಯವಿಲ್ಲ ಎಂದು ಈಗಾಗಲೇ ಸುಪ್ರೀಂಕೋರ್ಟ್ ತಿಳಿಸಿದೆ ಎಂದು ಪ್ರಮಾಣಪತ್ರದಲ್ಲಿ ಕೇಂದ್ರ ಸರಕಾರ ಉಲ್ಲೇಖಿಸಿದೆ.

ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹ ಹಾಗೂ ಇತರರು ಸಲ್ಲಿಸಿರುವ ಅರ್ಜಿ ತಪ್ಪು ತಿಳುವಳಿಕೆಯಿಂದ ಕೂಡಿದ್ದು ಸಮರ್ಥನೀಯವಲ್ಲ . ಆದ್ದರಿಂದ ಈ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಸರಕಾರದ ಪರವಾಗಿ ಪ್ರಮಾಣಪತ್ರ ಸಲ್ಲಿಸಿರುವ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಸ್ವಾಧೀನ ವ್ಯವಸ್ಥಾಪಕರು ಕೋರಿದ್ದಾರೆ.

ಸುಳ್ಳಿನಿಂದ ಕೂಡಿದ ಮಾಧ್ಯಮ ವರದಿ ಹಾಗೂ ಅಕ್ರಮ ಹಾಗೂ ಕಾನೂನುಬಾಹಿರವಾಗಿ ಪಡೆದಿರುವ ಅಪೂರ್ಣ ಆಂತರಿಕ ದಾಖಲೆಗಳ ಆಧಾರದಲ್ಲಿ ವಿಮರ್ಶೆ ನಡೆಸುವುದು ಮರುಪರಿಶೀಲನಾ ಅರ್ಜಿಗೆ ಪೂರಕವಾಗದು ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ಪ್ರಧಾನಿ ಕಚೇರಿಯ ಮೇಲ್ವಿಚಾರಣೆ ಹಸ್ತಕ್ಷೇಪವಲ್ಲ: ರಫೇಲ್ ಒಪ್ಪಂದದ ಮೇಲ್ವಿಚಾರಣೆ ನಡೆಸಿರುವುದನ್ನು ಹಸ್ತಕ್ಷೇಪ ಎಂದು ಪರಿಗಣಿಸಲಾಗದು ಎಂದು ಪ್ರಮಾಣಪತ್ರದಲ್ಲಿ ಕೇಂದ್ರ ಸರಕಾರ ಉಲ್ಲೇಖಿಸಿದೆ. ರಫೇಲ್ ಒಪ್ಪಂದದ ವ್ಯವಹಾರದಲ್ಲಿ ಅಕ್ರಮ ನಡೆದಿಲ್ಲ ಎಂದು ಸುಪ್ರೀಂಕೋರ್ಟ್‌ನ 2018ರ ಡಿಸೆಂಬರ್ 14ರ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಸರಕಾರದಿಂದ ಸರಕಾರಕ್ಕೆ ನಡೆದಿರುವ ಈ ಪ್ರಕ್ರಿಯೆಯ ಮೇಲುಸ್ತುವಾರಿಯನ್ನು ಪ್ರಧಾನಮಂತ್ರಿ ಕಚೇರಿ ನಿರ್ವಹಿಸಿರುವುದನ್ನು ಹಸ್ತಕ್ಷೇಪ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪ್ರಧಾನಮಂತ್ರಿಯವರ ಕಚೇರಿ ಹಾಗೂ ಫ್ರಾನ್ಸ್‌ನ ಅಧ್ಯಕ್ಷರ ಕಚೇರಿಯು ಈ ವ್ಯವಹಾರದ ಬೆಳವಣಿಗೆಯನ್ನು ಗಮನಿಸುತ್ತಿದೆ ಎಂದು ಅಂದಿನ ರಕ್ಷಣಾ ಸಚಿವರೇ ದಾಖಲೆಯಲ್ಲಿ ಸೇರಿಸಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ರಫೇಲ್ ಒಪ್ಪಂದ ಮರುಪರಿಶೀಲನಾ ಅರ್ಜಿಗೆ ಉತ್ತರಿಸಲು ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದ ಕೇಂದ್ರ ಸರಕಾರದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪ್ರಮಾಣಪತ್ರ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News