×
Ad

ರೋಡ್‌ ಶೋ ವೇಳೆ ಅರವಿಂದ್ ಕೇಜ್ರಿವಾಲ್‌ಗೆ ಹಲ್ಲೆ

Update: 2019-05-04 20:14 IST

ಹೊಸದಿಲ್ಲಿ, ಮೇ.4: ಹೊಸದಿಲ್ಲಿಯ ಮೋತಿ ನಗರದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ರೋಡ್‌ಶೋನಲ್ಲಿ ಭಾಗಿಯಾಗಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ.

ಇದು ವಿರೋಧಿಗಳ ಪ್ರಾಯೋಜಿತ ದಾಳಿಯಾಗಿದೆ ಎಂದು ಆಮ್ ಆದ್ಮಿ ಪಕ್ಷ ದೂರಿದೆ.

ಮೋತಿ ನಗರದಲ್ಲಿ ಕೇಜ್ರಿವಾಲ್ ಕಾರಿನಲ್ಲಿ ನಿಂತು ಸುತ್ತ ನೆರೆದಿದ್ದ ಜನರಿಗೆ ಕೈಬೀಸುತ್ತಿರುವಾಗ ಕೆಂಪು ಬಣ್ಣದ ಅಂಗಿ ಧರಿಸಿದ ವ್ಯಕ್ತಿಯೊಬ್ಬ ಏಕಾಏಕಿ ಕಾರಿನ ಮೇಲಿದ್ದ ಕೇಜ್ರಿವಾಲ್ ಕೆನ್ನೆಗೆ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಕೇಜ್ರಿವಾಲ್ ಜೊತೆಗಿದ್ದವರು ಆ ವ್ಯಕ್ತಿಯನ್ನು ಕಾರಿನಿಂದ ಕೆಳಗೆಳೆದು ಥಳಿಸಿದ್ದಾರೆ.

ಮುಖ್ಯಮಂತ್ರಿಗೆ ನೀಡಿರುವ ಭದ್ರತೆಯಲ್ಲಿ ಇನ್ನೊಂದು ಬಾರಿ ಲೋಪವಾಗಿದೆ ಎಂದು ದೂರಿರುವ ಆಪ್, ವಿರೋಧಿಗಳು ಪ್ರಾಯೋಜಿತ ದಾಳಿಯಿಂದ ದಿಲ್ಲಿಯಲ್ಲಿ ಪಕ್ಷವನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಹೆಸರು ಸುರೇಶ್ ಆಗಿದ್ದು ಕೈಲಾಶ್ ಪಾರ್ಕ್‌ನಲ್ಲಿ ಅಂಗಡಿ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.       

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News