×
Ad

ಕೇಂದ್ರದಿಂದ ಇನ್ನೊಂದು ಅಫಿದಾವಿತ್ ಸಲ್ಲಿಕೆ

Update: 2019-05-04 20:55 IST

ಹೊಸದಿಲ್ಲಿ,ಮೇ 4: ರಕ್ಷಣಾ ಸಚಿವಾಲಯದಿಂದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ವರ್ಗೀಕೃತ ದಾಖಲೆಗಳ ಬಿಡುಗಡೆಯು ಭಾರತೀಯ ಸಾರ್ವಭೌಮತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಕೇಂದ್ರವು ಶನಿವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿದಾವಿತ್ ನಲ್ಲಿ ತಿಳಿಸಿದೆ.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಕ್ಲೀನ್ ಚಿಟ್ ನೀಡಿರುವ ಡಿಸೆಂಬರ್ 2018ರ ತೀರ್ಪಿನ ಮರುಪರಿಶೀಲನೆಯನ್ನು ಕೋರಿ ಮಾಜಿ ಕೇಂದ್ರ ಸಚಿವರಾದ ಅರುಣ್ ಶೌರಿ ಮತ್ತು ಯಶವಂತ ಸಿನ್ಹಾ ಹಾಗೂ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ ಅವರ ಅರ್ಜಿಗೆ ಉತ್ತರವಾಗಿ ಈ ಅಫಿಡವಿಟ್‌ನ್ನು ಸಲ್ಲಿಸಲಾಗಿದೆ.

ಈ ದಾಖಲೆಗಳ ಬಿಡುಗಡೆಯು ಬಾಹ್ಯಾಕಾಶ,ಪರಮಾಣು ಸ್ಥಾವರಗಳು, ವ್ಯೂಹಾತ್ಮಕ ರಕ್ಷಣಾ ಸಾಮರ್ಥ್ಯಗಳು, ಸಶಸ್ತ್ರ ಪಡೆಗಳ ಕಾರ್ಯಸಿದ್ಧ ನಿಯೋಜನೆ,ದೇಶದಲ್ಲಿಯ ಮತ್ತು ಹೊರಗಿನ ಗುಪ್ತಚರ ಸಂಪನ್ಮೂಲಗಳು,ಭಯೋತ್ಪಾದನೆ ಮತ್ತು ಬಂಡಾಯ ನಿಗ್ರಹ ಕ್ರಮಗಳು ಇತ್ಯಾದಿಗಳಿಗೆ ಸಂಬಂಧಿಸಿದ ರಹಸ್ಯಗಳು ಬಹಿರಂಗಗೊಳ್ಳಲು ಕಾರಣವಾಗುತ್ತದೆ ಎಂದು ಕೇಂದ್ರವು ವಾದಿಸಿದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸೋರಿಕೆಯಾಗಿರುವ ರಕ್ಷಣಾ ಇಲಾಖೆಯ ದಾಖಲೆಗಳು ಮತ್ತು ಮಾಧ್ಯಮ ವರದಿಗಳ ಆಧಾರದಲ್ಲಿ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಲಾಗಿದೆ.

ಮರುಪರಿಶೀಲನೆ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಅಫಿಡವಿಟ್‌ನಲ್ಲಿ ಹೇಳಿರುವ ಕೇಂದ್ರವು,ಅದು ಸಮರ್ಥನೆಯಿಲ್ಲದ ಮಾಧ್ಯಮ ವರದಿಗಳು ಮತ್ತು ಉದ್ದೇಶಪೂರ್ವಕವಾಗಿ ಆಯ್ದ ರೀತಿಯಲ್ಲಿ ಬಿಂಬಿಸಿರುವ ಆಂತರಿಕ ಕಡತ ಟಿಪ್ಪಣಿಗಳನ್ನು ಆಧರಿಸಿದ್ದು,ಮೇಲ್ಕಾಣಿಸಿದ ಕಾರಣಗಳಿಂದಾಗಿ ಇದು ಮರುಪರಿಶೀಲನೆಗೆ ಆಧಾರವಾಗುವುದಿಲ್ಲ ಎಂದು ತಿಳಿಸಿದೆ.

ಮಾಧ್ಯಮಗಳಿಗೆ ಲಭ್ಯವಾಗಿರುವ ವರ್ಗೀಕೃತ ದಾಖಲೆಗಳನ್ನು ಸಾಕ್ಷಗಳನ್ನಾಗಿ ಬಳಸುವಂತಿಲ್ಲ ಎಂಬ ಕೇಂದ್ರ ಸರಕಾರದ ಆಕ್ಷೇಪವನ್ನು ಕಳೆದ ಎಪ್ರಿಲ್‌ನಲ್ಲಿ ತಿರಸ್ಕರಿಸುವ ಮೂಲಕ ನ್ಯಾಯಾಲಯವು ಅದಕ್ಕೆ ಹಿನ್ನಡೆಯನ್ನುಂಟು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News