ಫನಿ ಚಂಡಮಾರುತ: ಭಾರತೀಯ ಹವಾಮಾನ ಇಲಾಖೆಗೆ ವಿಶ್ವಸಂಸ್ಥೆ ಶ್ಲಾಘನೆ

Update: 2019-05-04 15:31 GMT

ವಿಶ್ವಸಂಸ್ಥೆ, ಮೇ 4: ‘ಫನಿ’ ಚಂಡಮಾರುತದ ಬಗ್ಗೆ ‘ಬಹುತೇಕ ಸೂಜಿಮೊನೆಯಷ್ಟು ನಿಖರ’ ಮುನ್ನೆಚ್ಚರಿಕೆಯನ್ನು ನೀಡಿರುವುದಕ್ಕಾಗಿ ವಿಶ್ವಸಂಸ್ಥೆಯ ವಿಪತ್ತು ನಿಭಾವಣೆ ಇಲಾಖೆಯು ಭಾರತೀಯ ಹವಾಮಾನ ಇಲಾಖೆಯನ್ನು ಶ್ಲಾಘಿಸಿದೆ.

ಈ ನಿಖರ ಮುನ್ನೆಚ್ಚರಿಕೆಯಿಂದಾಗಿ ಅಧಿಕಾರಿಗಳು ಜನರ ತೆರವು ಯೋಜನೆಯನ್ನು ರೂಪಿಸಲು ಸಾಧ್ಯವಾಯಿತು ಹಾಗೂ ಸಾವಿನ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸಲು ಸಾಧ್ಯವಾಯಿತು ಎಂದು ಅದು ಹೇಳಿದೆ.

ಅತ್ಯಂತ ಪ್ರಬಲ ಚಂಡಮಾರುತವು ಒಡಿಶಾದ ಕರಾವಳಿ ನಗರ ಪುರಿಯ ಸಮೀಪ ಶುಕ್ರವಾರ ನೆಲಕ್ಕೆ ಅಪ್ಪಳಿಸಿರುವುದನ್ನು ಸ್ಮರಿಸಬಹುದಾಗಿದೆ. ಚಂಡಮಾರುತದಿಂದಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ.

‘ಫನಿ’ ಚಂಡಮಾರುತದ ಚಲನವಲನಗಳ ಮೇಲೆ ವಿಶ್ವಸಂಸ್ಥೆಯ ಇಲಾಖೆಗಳು ನಿಗಾ ಇಟ್ಟಿವೆ ಹಾಗೂ ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ರಕ್ಷಣಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

‘‘ಅತ್ಯಂತ ತೀವ್ರ ಹವಾಮಾನ ವಿಪತ್ತನ್ನು ನಿಭಾಯಿಸುವಲ್ಲಿ ಭಾರತ ತೋರಿದ ಪರಿಣತಿಯು ‘ಸೆಂಡಾಯ್ ಫ್ರೇಮ್‌ವರ್ಕ್’ ಜಾರಿಗೆ ಹಾಗೂ ಆ ಮೂಲಕ ಇಂಥ ಪ್ರಾಕೃತಿಕ ದುರಂತ ಪ್ರಕರಣಗಳಲ್ಲಿನ ಸಾವಿನ ಸಂಖ್ಯೆ ಕಡಿತಕ್ಕೆ ಅದು ನೀಡಿದ ಮಹತ್ವದ ಕೊಡುಗೆಯಾಗಿದೆ’’ ಎಂದು ವಿಪತ್ತು ಅಪಾಯ ಕಡಿತಕ್ಕಾಗಿನ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯ ವಿಶೇಷ ಪ್ರತಿನಿಧಿ ಮಮಿ ಮಿರೊಟೊರಿ ಎಂದು ನುಡಿದರು.

‘‘ಬಹುತೇಕ ಅತ್ಯಂತ ನಿಖರ ಹವಾಮಾನ ಮುನ್ನೆಚ್ಚರಿಕೆಯಿಂದಾಗಿ, ನಿರ್ದಿಷ್ಟ ಪೀಡಿತ ಪ್ರದೇಶಗಳ ಜನರನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸಾಧ್ಯವಾಯಿತು. 10 ಲಕ್ಷಕ್ಕೂ ಅಧಿಕ ಮಂದಿಯನ್ನು ಪರಿಹಾರ ಶಿಬಿರಗಳಿಗೆ ಸಾಗಿಸಲಾಗಿತ್ತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News