ಇತಿಹಾಸದಲ್ಲೇ ಅತ್ಯಧಿಕ ಜನರ ಸ್ಥಳಾಂತರ: ನವೀನ್ ಪಟ್ಣಾಯಕ್

Update: 2019-05-04 17:06 GMT

ಭುವನೇಶ್ವರ, ಮೇ 4: ಫನಿ ಚಂಡಮಾರುತದ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಅತ್ಯಧಿಕ ಮಾನವ ಸ್ಥಳಾಂತರ ಕಾರ್ಯಾಚರಣೆ ಯನ್ನು ಒಡಿಶಾದಲ್ಲಿ ಕೈಗೊಳ್ಳಲಾಗಿದ್ದು, ಕೇವಲ 24 ಗಂಟೆಯಲ್ಲಿ 12 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ಣಾಯಕ್ ಹೇಳಿದ್ದಾರೆ.

ಕಳೆದ 43 ವರ್ಷಗಳಲ್ಲೇ ಒಡಿಶಾಕ್ಕೆ ಅಪ್ಪಳಿಸಿದ ಅತ್ಯಂತ ಭೀಕರ ಚಂಡಮಾರುತದಿಂದ ಜನರನ್ನು ಸಂರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ನೆರವಾದ ಸ್ವಯಂಸೇವಕರು ಹಾಗೂ ಅಧಿಕಾರಿಗಳನ್ನು ಅವರು ಶ್ಲಾಘಿಸಿದರು. ಅತ್ಯಂತ ವಿರಳವಾಗಿ ಸಂಭವಿಸುವ ಇಂತಹ ವಿಪತ್ತಿನ ಗಂಭೀರತೆಯನ್ನು ಊಹಿಸುವುದೂ ಸವಾಲಿನ ಕಾರ್ಯವಾಗಿದೆ. ಚಂಡಮಾರುತ ಯಾವ ದಿಕ್ಕಿನಲ್ಲಿ ಚಲಿಸುತ್ತದೆ ಎಂಬುದರ ಬಗ್ಗೆಯೂ ಖಚಿತತೆ ಇರಲಿಲ್ಲ . ಆದರೂ ನಾವು ಮೊದಲೇ ಸಿದ್ಧತೆ ಮಾಡಿಕೊಂಡಿದ್ದೆವು. ಇದರಿಂದ ಇತಿಹಾಸದಲ್ಲೇ ಅತ್ಯಂತ ಬೃಹತ್ ಮಾನವ ಸ್ಥಳಾಂತರ ಕಾರ್ಯ ಸುಗಮವಾಗಿ ಸಾಗಿದೆ. ಗಂಜಾಂನಿಂದ 3.2 ಲಕ್ಷ ಹಾಗೂ ಪುರಿಯಿಂದ 1.3 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಈ ಕಾರ್ಯವನ್ನು ಯಶಸ್ವಿಗೊಳಿಸಿದ 4.5 ಕೋಟಿ ಜನರನ್ನು ಅಭಿನಂದಿಸುತ್ತೇನೆ. ಮಹತ್ವದ ಮೂಲಭೂತ ಸೌಲಭ್ಯಗಳನ್ನು ಮರು ನಿರ್ಮಿಸುವ ಕಾರ್ಯ ಈಗ ನಡೆಯುತ್ತಿದೆ ಎಂದು ಪಟ್ಣಾಯಕ್ ಹೇಳಿದರು.

ಲಕ್ಷಾಂತರ ಮರಗಳು ಉರುಳಿಬಿದ್ದಿದ್ದು ರಸ್ತೆ ತಡೆ ಉಂಟಾಗಿದೆ. ಹಲವು ಮನೆಗಳಿಗೆ ಹಾಗೂ ಕಟ್ಟಡಗಳಿಗೆ ಹಾನಿಯಾಗಿದೆ. ಪುರಿ ಮತ್ತು ಖುದ್ರ ಜಿಲ್ಲೆಯ ಕೆಲವು ಭಾಗಗಳಲ್ಲಿ ವಿದ್ಯುತ್‌ಪೂರೈಕೆ ವ್ಯವಸ್ಥೆಗೆ ಸಂಪೂರ್ಣ ಹಾನಿಯಾಗಿದೆ. ಕಟಕ್, ಭದ್ರಕ್, ಕೇಂದ್ರಪಾದ, ಜಗತ್‌ಸಿಂಗ್‌ಪುರ, ಬಾಲಾಸೋರ್, ಮಯೂರ್‌ಭಂಜ್, ಧೆಂಕನಲ್, ನಯಾಗಡ ಜಿಲ್ಲೆಯ ಮೇಲೂ ಚಂಡಮಾರುತ ಪರಿಣಾಮ ಬೀರಿದೆ ಎಂದು ಪಟ್ಣಾಯಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News