ಫುಟ್ಬಾಲ್ ತಂಡದ ಕೋಚ್ ಹುದ್ದೆಗೆ ನಾಲ್ವರ ಹೆಸರು ಅಂತಿಮ

Update: 2019-05-04 17:57 GMT

ಹೊಸದಿಲ್ಲಿ, ಮೇ 4: ಭಾರತದ ಪುರುಷರ ರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್ ಹುದ್ದೆಗೆ ದಕ್ಷಿಣ ಕೊರಿಯಾದ ಲೀ ಮಿನ್ ಸಂಗ್, ಆಲ್ಬರ್ಟ್ ರೋಕ ಸೇರಿದಂತೆ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ (ಎಐಎಫ್‌ಎಫ್) ತಾಂತ್ರಿಕ ಸಮಿತಿ ಅಂತಿಮಗೊಳಿಸಿದ್ದು ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆೆ. ಸಂಗ್ ಅವರು ಕೋಚ್ ಆಗಿದ್ದಾಗ ದಕ್ಷಿಣ ಕೊರಿಯಾ ತಂಡ ಎರಡು ಬಾರಿ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡಿತ್ತು. ಸ್ಪೇನ್‌ನ ಖ್ಯಾತ ಕೋಚ್, ಬೆಂಗಳೂರು ಎಫ್‌ಸಿ ತಂಡದ ಕೋಚ್ ಆಗಿ ತಂಡದ ಯಶಸ್ಸಿಗೆ ಕಾರಣರಾಗಿರುವ ಆಲ್ಬರ್ಟ್ ರೋಕ, ಕ್ರೊಯೇಷಿಯಾದ ರಾಷ್ಟ್ರೀಯ ತಂಡದ ಮಾಜಿ ಮ್ಯಾನೇಜರ್ ಇಗೋರ್ ಸ್ಟಿಮಕ್ ಮತ್ತು ಸ್ವೀಡನ್‌ನ ಮಾಜಿ ಕೋಚ್ ಹಕನ್ ಎರಿಕ್ಸನ್ ಅವರ ಹೆಸರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಭಾರತದ ಮಾಜಿ ಅಂತರ್‌ರಾಷ್ಟ್ರೀಯ ಆಟಗಾರ ಶ್ಯಾಮ್ ಥಾಪ ನೇತೃತ್ವದ ತಾಂತ್ರಿಕ ಸಮಿತಿ ತಿಳಿಸಿದೆ. ಮೇ 8 ಅಥವಾ 9ರಂದು ಈ ನಾಲ್ಕು ಮಂದಿಯನ್ನು ಮತ್ತೊಂದು ಸುತ್ತಿನ ಸ್ಕೈಪ್ ಸಂದರ್ಶನ ನಡೆಸಲಾಗುವುದು. ಇದರಲ್ಲಿ ಆಯ್ಕೆ ಮಾಡಲಾದ ಹೆಸರನ್ನು ಫುಟ್ಬಾಲ್ ಒಕ್ಕೂಟದ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡಲಾಗುತ್ತದೆ. ಕಾರ್ಯಕಾರಿ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಶ್ಯಾಮ್ ಥಾಪ ಹೇಳಿದ್ದಾರೆ.

ಭಾರತೀಯ ತಂಡ ಜೂನ್ 5ರಿಂದ 8ರವರೆಗೆ ನಡೆಯಲಿರುವ ಕಿಂಗ್ಸ್ ಕಪ್ ಟೂರ್ನಿಯಲ್ಲಿ ಆಡಲಿದೆ. ಮೇ ಮೂರನೇ ವಾರದಲ್ಲಿ ನೂತನ ಕೋಚ್ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಅಭ್ಯಾಸ ಶಿಬಿರ ನಡೆಯಲಿದೆ. ಎಎಫ್‌ಸಿ ಏಶ್ಯನ್ ಕಪ್ ಟೂರ್ನಿಯಲ್ಲಿ ಭಾರತೀಯ ತಂಡ ತೋರಿದ ಸ್ಫೂರ್ತಿದಾಯಕ ಪ್ರದರ್ಶನ ಹಾಗೂ ಏಶ್ಯನ್ ಕಪ್ ಟೂರ್ನಿಯವರೆಗೆ 13 ಪಂದ್ಯಗಳ ಅಜೇಯ ಸಾಧನೆಯ ಹಿನ್ನೆಲೆಯಲ್ಲಿ ಭಾರತೀಯ ತಂಡದ ಕೋಚ್ ಆಗಲು ಫ್ರಾನ್ಸ್‌ನ ವಿಶ್ವಕಪ್ ವಿಜೇತ ತಂಡದ ಕೋಚ್ ಆಗಿದ್ದ ರೇಮಂಡ್ ಡೊಮೆನೆಕ್, ಇಂಗ್ಲೆಂಡ್ ತಂಡದ ಮಾಜಿ ಮ್ಯಾನೇಜರ್ ಗಳಾದ ಸ್ವೆನ್‌ಗೊರಾನ್ ಎರಿಕ್ಸನ್ ಮತ್ತು ಸ್ಯಾಂ ಅಲರ್ಡೈಸ್ ಸೇರಿದಂತೆ 250ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News