ಅಫ್ರಿದಿಯ ಚೊಚ್ಚಲ, 37 ಎಸೆತಗಳ ಶತಕದ ಹಿಂದಿತ್ತು ಭಾರತದ ಈ ಪ್ರಸಿದ್ಧ ಕ್ರಿಕೆಟಿಗನ ಬ್ಯಾಟ್!

Update: 2019-05-05 10:09 GMT

ಹೊಸದಿಲ್ಲಿ, ಮೇ 5: ಶ್ರೀಲಂಕಾದ ವಿರುದ್ಧ 1996ರಲ್ಲಿ ಕೇವಲ 37 ಎಸೆತಗಳಲ್ಲಿ ಮಿಂಚಿನ ವೇಗದಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಪಾಕ್ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ನೂತನ ಏಕದಿನ ವಿಶ್ವ ದಾಖಲೆ ನಿರ್ಮಿಸಿದ್ದರು. ಸಚಿನ್ ತೆಂಡುಲ್ಕರ್‌ರ ಬ್ಯಾಟ್‌ನ್ನು ಬಳಸಿಕೊಂಡು ತಾನು ಈ ಸಾಧನೆ ಮಾಡಿದ್ದಾಗಿ ‘ಗೇಮ್ ಚೇಂಜರ್’ ಹೆಸರಿನ ತನ್ನ ಆತ್ಮಚರಿತ್ರೆಯಲ್ಲಿ ಅಫ್ರಿದಿ ಬಹಿರಂಗಪಡಿಸಿದ್ದಾರೆ.

ವಿಶ್ವ ಖ್ಯಾತಿಯ ಕ್ರೀಡಾ ಸಾಧನಗಳ ಉತ್ಪಾದನೆಯ ರಾಜಧಾನಿಯಾಗಿರುವ ಸಿಯಾಲ್‌ಕೋಟ್‌ನಿಂದ ಮತ್ತೊಂದು ಬ್ಯಾಟ್ ಮಾಡಿಕೊಂಡು ಬರುವಂತೆ ಸಚಿನ್ ತನ್ನ ಫೇವರಿಟ್ ಬ್ಯಾಟ್‌ನ್ನು ವಕಾರ್ ಯೂನಿಸ್ ಕೈಯ್ಯಲ್ಲಿ ಕೊಟ್ಟಿದ್ದರು. ವಕಾರ್ ಅವರು ಸಚಿನ್‌ರ ಬ್ಯಾಟನ್ನು ಸಿಯಾಲ್‌ಕೋಟ್‌ಗೆ ತೆಗೆದುಕೊಂಡು ಹೋಗುವ ಮೊದಲು ನಾನು ಬ್ಯಾಟಿಂಗ್‌ಗೆ ತೆರಳುವಾಗ ಅದನ್ನು ನನಗೆ ನೀಡಿದ್ದರು. ನಾನು ಆ ಬ್ಯಾಟ್‌ನಿಂದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ್ದೆ. ನೈರೋಬಿಯಲ್ಲಿ ಸಚಿನ್ ತೆಂಡುಲ್ಕರ್‌ರ ಬ್ಯಾಟ್ ಸಹಾಯದಿಂದಲೇ ತನ್ನ ಮೊದಲ ಶತಕವನ್ನು ಬಾರಿಸಿದ್ದೇನೆ ಎಂದು ಅಫ್ರಿದಿ ಹೇಳಿದ್ದಾರೆ.

ತಾನು ಚೊಚ್ಚಲ ಶತಕ ಗಳಿಸಿದಾಗ ತನ್ನ ವಯಸ್ಸು 16 ಆಗಿರಲಿಲ್ಲ. ಆಗ ತನಗೆ 21 ವಯಸ್ಸಾಗಿತ್ತು. ತನ್ನ ಜನ್ಮದಿನವನ್ನು ತಪ್ಪಾಗಿ ನಮೂದಿಲಾಗಿತ್ತು ಎಂದು ಆತ್ಮಚರಿತ್ರೆಯಲ್ಲಿ ಅಫ್ರಿದಿ ಬಹಿರಂಗಪಡಿಸಿದ್ದರು.

 ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಅಫ್ರಿದಿ ಟ್ವೆಂಟಿ-20 ಶೈಲಿಯಲ್ಲಿ ಆಡಿದ್ದು 40 ಎಸೆತಗಳಲ್ಲಿ 102 ರನ್ ಗಳಿಸಿದ್ದರು. ಇದರಲ್ಲಿ 11 ಸಿಕ್ಸರ್ ಹಾಗೂ ಆರು ಬೌಂಡರಿಗಳಿದ್ದವು. ಆಗ ಅವರು ತನ್ನ 2ನೇ ಏಕದಿನ ಪಂದ್ಯವನ್ನು ಆಡಿದ್ದರು. ಮೊದಲ ಬಾರಿ ಬ್ಯಾಟಿಂಗ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News