ಸಂಸ್ಥೆಗಳು ನಿಯಮ ಉಲ್ಲಂಘಿಸಿದರೆ ದೂರು ಕೊಡಿ: ವಿಲ್ಮಾ ತಾವ್ರೋ

Update: 2019-05-05 16:36 GMT

ಉಳ್ಳಾಲ, ಮೇ 5: ಯಾವುದೇ ಸಂಸ್ಥೆಯಲ್ಲಿ ಕಾರ್ಮಿಕರು ಎಂಟು ಗಂಟೆ ಕೆಲಸ ಮಾಡಿದರೆ ಕನಿಷ್ಠ ವೇತನ ನೀಡಬೇಕಿದ್ದು, ಹೆಚ್ಚು ಅವಧಿ ಕೆಲಸ ಮಾಡಿದರೆ ಹೆಚ್ಚು ವೇತನ ಹಾಗೂ ವಾರಕ್ಕೊಂದು ರಜೆ ವೇತನ ಸಹಿತ ನೀಡದಿದ್ದರೆ ಕಾರ್ಮಿಕ ಇಲಾಖೆಗೆ ದೂರು ನೀಡಬಹುದು ಎಂದು ಮಂಗಳೂರು ಉಪವಿಭಾಗದ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ ಹೇಳಿದರು.

ಪಾನೀರ್ ಮೆರ್ಸಿಯಮ್ಮನವರ ದೇವಾಲಯ ಹಾಗೂ ಕೆಥೊಲಿಕ್ ಸಭಾ ಪಾನೀರ್ ಘಟಕದ ಜಂಟಿ ಆಶ್ರಯದಲ್ಲಿ ಕಾರ್ಮಿಕ ದಿನದ ಪ್ರಯುಕ್ತ ರವಿವಾರ ಪಾನೀರ್ ಚರ್ಚ್ ಸಭಾಂಗಣದಲ್ಲಿ ನಡೆದ ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಲಾಭಾಂಶದಲ್ಲಿ 8.33 ಬೋನಸ್, 50 ಕಾರ್ಮಿಕರಿದ್ದರೆ ಸ್ಕಾಲರ್ ಶಿಪ್, ಮತದಾನ, ಕಾರ್ಮಿಕರ ದಿನ, ರಾಷ್ಟ್ರೀಯ ಹಬ್ಬಗಳ ಸಂದರ್ಭ ರಜೆ ನೀಡದಿದ್ದರೆ ದುಪ್ಪಟ್ಟು ವೇತನ ನೀಡಬೇಕಿದೆ. ಅಸಂಘಟಿತ ಕಾರ್ಮಿಕರಿಗೆ ಇರುವ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆ ರಾಜ್ಯದಲ್ಲೇ ಉತ್ತಮ ಹೆಸರು ಪಡೆದಿದೆ. ಒಂದು ಕಟ್ಟಡದಲ್ಲಿ ಎಷ್ಟು ಮಂದಿ ಕೆಲಸ ಮಾಡುತ್ತಾರೋ ಅವರೆಲ್ಲಾ ಕಟ್ಟಡ ಕಾರ್ಮಿಕರಾಗಿ ಗುರುತಿಸಲಾಗುತ್ತದೆ ಎಂದರು.

ಪಾನೀರ್ ಚರ್ಚ್‌ನ ಧರ್ಮಗುರು ರೆ.ಫಾ.ಡೆನ್ನಿಸ್ ಸುವಾರಿಸ್ ಅಧ್ಯಕ್ಷತೆ ವಹಿಸಿ, ಸರಕಾರದಿಂದ ಹಲವಾರು ಯೋಜನೆ, ಸವಲತ್ತುಗಳಿದ್ದರೂ ಅದನ್ನು ಪಡೆಯುವಲ್ಲಿ ಕ್ರೈಸ್ತ ಸಮುದಾಯ ಹಿಂದೆ ಬಿದ್ದಿದೆ. ದುಡಿದಿರುವುದರಲ್ಲೇ ಸಿಕ್ಕಿದ್ದು ಸಾಕು ಎನ್ನುವ ಭಾವನೆಯೇ ಇದಕ್ಕೆ ಕಾರಣ. ಅದನ್ನೆಲ್ಲಾ ಮನಸ್ಸಿನಿಂದ ತೊರೆದು ಒಂದಷ್ಟು ಶ್ರಮಪಟ್ಟು ಸರಕಾರದ ಸವಲತ್ತುಗಳನ್ನು ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿ ವಿರೇಂದ್ರ ಕುಮಾರ್, ಕಾರ್ಮಿಕ ಅಧಿಕಾರಿ ಹರೀಶ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಪಾನೀರ್ ಚರ್ಚ್‌ನ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಎಸ್‌ವಿಪಿ ಸಭೆಯ ಅಧ್ಯಕ್ಷ ಜಾನ್ ಪಾಯ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಿಲಿಪ್ ಡಿಸೋಜ, ಮೈಕಲ್ ಡಿಸೋಜ, ಉರ್ಬನ್ ಫೆರಾವೋ, ಸ್ಟೀವನ್ ವಾಸ್, ಸಿಂತಿಯಾ ನೊರೊನ್ಹ ಉಪಸ್ಥಿತರಿದ್ದರು.

ಕೆಥೊಲಿಕ್ ಸಭಾ ಪಾನೀರ್ ಘಟಕಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಸ್ವಾಗತಿಸಿದರು. ಕಾರ್ಯದರ್ಶಿ ರುವಿತಾ ಮೆನೇಜಸ್ ವಂದಿಸಿದರು. ರೇಶ್ಮಾ ಸಂತನೇಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News