ಫನಿ ಆರ್ಭಟಕ್ಕೆ ಬಲಿಯಾದವರ ಸಂಖ್ಯೆ 38ಕ್ಕೆ ಏರಿಕೆ

Update: 2019-05-06 03:56 GMT

ಭುವನೇಶ್ವರ, ಮೇ 6: ಎರಡು ದಶಕಗಳಲ್ಲೇ ಭೀಕರ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸಿ ಎರಡು ದಿನಗಳ ಬಳಿಕ ಫನಿ ಆರ್ಭಟಕ್ಕೆ ಬಲಿಯಾದವರ ಸಂಖ್ಯೆ 38ಕ್ಕೆ ಏರಿದೆ.

ಪುರಿ ಜಿಲ್ಲೆಯೊಂದರಲ್ಲೇ 25 ಮಂದಿ ಜೀವ ಕಳೆದುಕೊಂಡಿದ್ದಾರೆ. ಮೃತಪಟ್ಟವರ ಪೈಕಿ 18 ತಿಂಗಳ ಮಗು ಕೂಡಾ ಸೇರಿದ್ದು, ಗಾಳಿಯ ರಭಸಕ್ಕೆ ಹಾರಿ ಹೋದ ಮಗು ಕೆರೆಯೊಂದಕ್ಕೆ ಎಸೆಯಲ್ಪಟ್ಟು, ಜಲಸಮಾಧಿಯಾಗಿತ್ತು.

ಚಂಡಮಾರುತದಿಂದ ಆಗಿರುವ ಹಾನಿಯನ್ನು ಅಂದಾಜಿಸುವ ಕಾರ್ಯ ನಡೆದಿದ್ದು, 1200 ಕೋಟಿ ರೂ. ಮೌಲ್ಯದ ವಿದ್ಯುತ್ ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಪುರಿ, ಖುರ್ದಾ, ಬಾಲ್ಸೋರ್, ಭದ್ರಕ್, ಕಟಕ್, ಧೆಂಕನಾಲ್, ಗಂಜಮ್, ಜಗತ್‌ಸಿಂಗ್‌ಪುರ, ಜಾಜ್‌ಪುರ, ಕೇಂದ್ರಪಾರ ಮತ್ತು ಮಯೂರ ಭಂಜ್ ಜಿಲ್ಲೆಗಳ 14,835 ಗ್ರಾಮ ಹಾಗೂ 46 ಪಟ್ಟಣಗಳ ಒಂದು ಕೋಟಿಗೂ ಹೆಚ್ಚು ಮಂದಿಗೆ ಚಂಡಮಾರುತದಿಂದ ತೊಂದರೆಯಾಗಿದೆ ಎಂದು ಹೇಳಲಾಗಿದೆ.

ಪುರಿ ಜಿಲ್ಲೆಯಲ್ಲಿ ದೂರಸಂಪರ್ಕ ವ್ಯವಸ್ಥೆಗೂ ಧಕ್ಕೆಯಾಗಿದ್ದು, ಭುವನೇಶ್ವರದಲ್ಲಿ ಸೇವೆ ಪುನರಾರಂಭಿಸಲಾಗಿದೆ. ಪುರಿ ಹಾಗೂ ಖುರ್ದಾ ಜಿಲ್ಲೆಗಳ 35 ಲಕ್ಷ ಮಂದಿ ಸತತ ಮೂರನೇ ದಿನವೂ ಕಗ್ಗತ್ತಲಲ್ಲಿದ್ದಾರೆ. ಕನಿಷ್ಠ ರಾಜಧಾನಿಯ ಆಸ್ಪತ್ರೆ ಮತ್ತು ಬಿಜು ಪಟ್ನಾಯಕ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆದ್ಯತೆ ಮೇಲೆ ವಿದ್ಯುತ್ ವ್ಯವಸ್ಥೆ ಪುನರಾರಂಭಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಶುಕ್ರವಾರ ಮುಂಜಾನೆ 200 ಕಿಲೋಮೀಟರ್‌ಗೂ ಅಧಿಕ ವೇಗದಲ್ಲಿ ಚಂಡಮಾರುತ ಅಪ್ಪಳಿಸಿದ ಪುರಿ ನಗರಕ್ಕೆ ರಸ್ತೆ ಸಂಪರ್ಕ ಪುನರಾರಂಭಿಸಲು ಸರ್ಕಾರ ಶ್ರಮಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News