×
Ad

ಅಡ್ವಾಣಿಗೆ ‘ಪಂಚ್’ ನೀಡಿದ `ಬಾಕ್ಸರ್' ಮೋದಿ: ರಾಹುಲ್ ವ್ಯಂಗ್ಯ

Update: 2019-05-06 17:22 IST

ಭಿವಾನಿ, ಮೇ 6: ನಿರುದ್ಯೋಗದ ವಿರುದ್ಧ ಹೋರಾಡಲು ಬಾಕ್ಸಿಂಗ್ ಕಣಕ್ಕಿಳಿದ `ಬಾಕ್ಸರ್' ನರೇಂದ್ರ ಮೋದಿ ಕೊನೆಗೆ ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ `ಪಂಚ್' ನೀಡಿ ಬಿಟ್ಟರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯನ್ನು ವ್ಯಂಗ್ಯವಾಡಿದ್ದಾರೆ.

ಭಾರತದ ಬಾಕ್ಸಿಂಗ್ ನರ್ಸರಿ ಎಂದೇ ಕರೆಯಲ್ಪಡುವ ಹಾಗೂ ವಿಜೇಂದರ್ ಸಿಂಗ್ ಸಹಿತ ಖ್ಯಾತ ಬಾಕ್ಸರುಗಳನ್ನು ಕೊಡುಗೆಯಾಗಿ ನೀಡಿರುವ ಭಿವಾನಿ ಎಂಬಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಮೇಲಿನಂತೆ ಹೇಳಿದರು.

“ತಮ್ಮ 56 ಇಂಚುಗಳ ಎದೆಯ ಬಗ್ಗೆ ಕೊಚ್ಚಿಕೊಂಡ ಬಾಕ್ಸರ್ ನರೇಂದ್ರ ಮೋದಿ ನಿರುದ್ಯೋಗ, ರೈತರ ಸಮಸ್ಯೆ, ಭ್ರಷ್ಟಾಚಾರ ಮತ್ತಿತರ ಸಮಸ್ಯೆಗಳ ವಿರುದ್ಧ ಹೋರಾಡಲು ಬಾಕ್ಸಿಂಗ್ ರಿಂಗ್‍ ಪ್ರವೇಶಿಸಿದ್ದರು. ನರೇಂದ್ರ ಮೋದಿಯ ಕೋಚ್ ಅಡ್ವಾಣಿ ಜಿ, ಗಡ್ಕರಿ ಹಾಗೂ ತಂಡದ ಇತರ ಸದಸ್ಯರಿದ್ದರು. ಆದರೆ ಮೋದಿ ರಿಂಗ್ ಪ್ರವೇಶಿಸಿದೊಡನೆ ಮಾಡಿದ ಮೊದಲ ಕೆಲಸವೆಂದರೆ ಅಡ್ವಾಣಿ ಅವರ ಮುಖಕ್ಕೆ ಪಂಚ್ ಮಾಡಿದ್ದು'' ಎಂದು ಹೇಳಿದ ರಾಹುಲ್, ಪ್ರಧಾನಿ  ಹಿರಿಯ ಬಿಜೆಪಿ ನಾಯಕನನ್ನು `ಅವಮಾನಿಸಿದ್ದಾರೆ' ಎಂದರು.

``ನಂತರ ಬಾಕ್ಸರ್ ಸಣ್ಣ ವರ್ತಕರನ್ನು ಅಮಾನ್ಯೀಕರಣ ಹಾಗೂ ಗಬ್ಬರ್ ಸಿಂಗ್ ಟ್ಯಾಕ್ಸ್ ಮೂಲಕ ಚಚ್ಚಿದರು,'' ಎಂದು ಜಿಎಸ್ಟಿಯನ್ನು ಉಲ್ಲೇಖಿಸಿ ರಾಹುಲ್ ಹೇಳಿದರು.

ಭಿವಾನಿ-ಮಹೇಂದರ್ ಘರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ಹರ್ಯಾಣದ ಮಾಜಿ ಸೀಎಂ ದಿ ಬನ್ಸೀಲಾಲ್  ಅವರ ಮೊಮ್ಮಗಳು, ಹಾಲಿ ಶಾಸಕ ಕಿರಣ್ ಚೌಧುರಿಯ ಪುತ್ರಿ, ಮಾಜಿ ಸಂಸದೆಯಾಗಿರುವ ಶ್ರುತಿ ಚೌಧುರಿಯನ್ನು ಕಣಕ್ಕಿಳಿಸಿದೆ. ಬಿಜೆಪಿಯಿಂದ  ಹಾಲಿ ಸಂಸದ ಧರಂವೀರ್ ಸ್ಪರ್ಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News