×
Ad

ಸಮಸ್ಯೆ ಸೃಷ್ಟಿಸಿದ ಬಿಜೆಪಿ ಶಾಸಕ ರಾಜಾ ಸಿಂಗ್ ರನ್ನು ಎಳೆದುಕೊಂಡು ಹೋದ ಪೊಲೀಸರು

Update: 2019-05-06 17:31 IST

ಹೈದರಾಬಾದ್, ಮೇ 6: ಪ್ರಾರ್ಥನಾ ಸ್ಥಳವನ್ನು ಕೆಡವಿದ ಸ್ಥಳದಲ್ಲಿ ಶೆಡ್ ನಿರ್ಮಾಣ ವಿಚಾರದಲ್ಲಿ ಉಂಟಾದ ವಿವಾದದಿಂದ  ಘರ್ಷಣೆಗಳು ನಡೆದ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ತೆಲಂಗಾಣದ ಏಕೈಕ ಬಿಜೆಪಿ ಶಾಸಕ ಟಿ ರಾಜಾ ಸಿಂಗ್  ಸಹಿತ ಕೆಲವರನ್ನು ವಶಕ್ಕೆ ಪಡೆದುಕೊಂಡು, ಬಿಡುಗಡೆಗೊಳಿಸಿದ್ದಾರೆ. ಘರ್ಷಣೆಗಳು ನಡೆಯುತ್ತಿವೆ ಎಂದು ತಿಳಿದು ಪರಿಸ್ಥಿತಿಯನ್ನು ಪರಾಮರ್ಶಿಸಲು ಶಾಸಕ ರವಿವಾರ ರಾತ್ರಿ ಬಂದಿದ್ದರೆಂದು ಬಿಜೆಪಿ ಹೇಳಿಕೊಂಡಿದೆ.

ಆದರೆ ಘರ್ಷಣೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್, ನೆರೆದಿದ್ದ ಜನರನ್ನು ಚದುರಿಸಿ “ಲೇ ಜಾವೋ ಇಸ್ಕೋ, ಉಠಾಕೆ ಲೇ ಜಾವೋ'' (ಆತನನ್ನು ಕರೆದುಕೊಂಡು ಹೋಗಿ) ಎಂದು  ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ಆದರೆ ಪೊಲೀಸ್ ಕ್ರಮವನ್ನು ರಾಜಾ ಸಿಂಗ್ ವಿರೋಧಿಸಿದರೂ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ನಂತರ ಬಿಡುಗಡೆಗೊಳಿಸಿದ್ದಾರೆ.

ಈ ಘಟನೆಯ ಕುರಿತಾದ ವೀಡಿಯೋವನ್ನು ನಂತರ ರಾಜಾ ಸಿಂಗ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ @ಟೈಗರ್ ರಾಜಾ ಸಿಂಗ್ ಮುಖಾಂತರ ಟ್ವೀಟ್ ಮಾಡಿ ತಮ್ಮನ್ನು ಪೊಲೀಸ್ ಆಯುಕ್ತರು ಬಂಧಿಸಿದ್ದನ್ನು ವಿವರಿಸಿದ್ದಾರೆ.

ಸಿಂಗ್ ಅವರು ಹೈದರಾಬಾದ್ ನ ಗೋಷಮಹಲ್ ಕ್ಷೇತ್ರದ ಶಾಸಕರಾಗಿದ್ದಾರೆ. ಪೊಲೀಸರು ತಾರತಮ್ಯಕಾರಿ ನೀತಿ ಅನುಸರಿಸಿದ್ದಾರೆ ಹಾಗೂ ಕೇವಲ ಹಿಂದೂ ಕಾರ್ಯಕರ್ತರತ್ತ ಲಾಠಿ ಬೀಸಿದ್ದಾರೆ ಎಂದು ತೆಲಂಗಾಣ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಕಾನೂನು ಉಲ್ಲಂಘಿಸಿ ಸರಕಾರಿ ಜಾಗವನ್ನು ಆಕ್ರಮಿಸಲು ಯತ್ನಿಸಿದ್ದನ್ನು ವಿರೋಧಿಸಿದ್ದಕ್ಕೆ ಈ ಕಾರ್ಯಾಚರಣೆ ನಡೆದಿತ್ತು ಎಂದೂ ಅವರು  ದೂರಿದ್ದಾರೆ.

ತೆಲಂಗಾಣ ಬಿಜೆಪಿ ಅಧ್ಯಕ್ಷ ಕೆ.ಲಕ್ಷ್ಮಣ್ ಅವರ ನೇತೃತ್ವದಲ್ಲಿ ಬಿಜೆಪಿ ನಿಯೋಗವೊಂದು ಇಂದು ಸಂಜೆ ರಾಜ್ಯ ಪೊಲೀಸ್ ಮುಖ್ಯಸ್ಥ ಎಂ.ಮಹೇಂದರ್ ರೆಡ್ಡಿ ಅವರನ್ನು ಭೇಟಿಯಾಗಲಿದೆ.

ತಮ್ಮ ಪ್ರಚೋದನಾತ್ಮಕ ಭಾಷಣಗಳಿಂದ ಕುಖ್ಯಾತಿ ಪಡೆದಿರುವ ರಾಜಾ ಸಿಂಗ್ ಅವರ ವಿರುದ್ಧ 43 ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News