×
Ad

ಸಿಜೆಐ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ದೂರನ್ನು ವಜಾಗೊಳಿಸಿದ ಸುಪ್ರೀಂ ಆಂತರಿಕ ತನಿಖಾ ಸಮಿತಿ

Update: 2019-05-06 18:12 IST

ಹೊಸದಿಲ್ಲಿ, ಮೇ 6: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ದೂರನ್ನು ಸೋಮವಾರ ನ್ಯಾಯಾಲಯದ ತ್ರಿಸದಸ್ಯ ಆಂತರಿಕ ತನಿಖಾ ಸಮಿತಿ ವಜಾಗೊಳಿಸಿದೆ.

ಸಿಜೆಐ ರಂಜನ್ ಗೊಗೊಯಿ ಅವರ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲವೆಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಜಸ್ಟಿಸ್ ಎಸ್ ಎ ಬೊಬ್ಡೆ ನೇತೃತ್ವದ ಸಮಿತಿ ಹೇಳಿದೆಯಲ್ಲದೆ, ಸಿಜೆಐ ಗೊಗೊಯಿ ವಿರುದ್ಧ ಸುಪ್ರೀಂ ಕೋರ್ಟಿನ ಮಾಜಿ ಉದ್ಯೋಗಿ ದಾಖಲಿಸಿದ್ದ ಆರೋಪಗಳನ್ನು ವಜಾಗೊಳಿಸಿದೆ.

ಆಂತರಿಕ ಸಮಿತಿಯ ವರದಿಯ ವಿವರಗಳನ್ನು 2003ರ ಇಂದಿರಾ ಜೈಸಿಂಗ್ ಪ್ರಕರಣದ ತೀರ್ಪಿನಂತೆ ಬಹಿರಂಗಗೊಳಿಸಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ದೂರುದಾರೆ ಈ ಹಿಂದೆ ಮುಖ್ಯ ನ್ಯಾಯಮೂರ್ತಿಗಳ ದಿಲ್ಲಿಯಲ್ಲಿರುವ ಗೃಹ ಕಚೇರಿಯಲ್ಲಿ ಕೆಲಸ ಮಾಡಿದ್ದು, ಆಕೆ ಸಲ್ಲಿಸಿದ್ದ ಅಫಿದಾವಿತ್ ಆಧಾರದಲ್ಲಿ ಕೆಲ ಸುದ್ದಿತಾಣಗಳು ವರದಿ ಪ್ರಕಟಿಸಿದ್ದವು. ಈ ಆರೋಪಗಳು ನಂಬಲು ಸಾಧ್ಯವಿಲ್ಲ ಎಂದು  ಸಿಜೆಐ ರಂಜನ್ ಗೊಗೊಯಿ ನ್ಯಾಯಾಲಯದ ವಿಶೇಷ ವಿಚಾರಣೆ ವೇಳೆ ಹೇಳಿದ್ದರಲ್ಲದೆ ತಮ್ಮ ವಿರುದ್ಧದ ಆರೋಪಗಳ ಹಿಂದೆ ದೊಡ್ಡ ಷಡ್ಯಂತ್ರವಿದೆಯೆಂದೂ ಆರೋಪಿಸಿದ್ದರು.

ಆರಂಭದಲ್ಲಿ ತ್ರಿಸದಸ್ಯ ಸಮಿತಿಯಲ್ಲಿ ಜಸ್ಟಿಸ್ ಎನ್ ವಿ ರಮಣ ಇದ್ದರೂ ದೂರುದಾರೆಯ ಮನವಿಯಂತೆ ಅವರು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು. ದೂರುದಾರೆ ತನಿಖಾ ಪ್ರಕ್ರಿಯೆಯಲ್ಲಿ ಎರಡು ದಿನ ಭಾಗವಹಿಸಿದ್ದರೂ ಮೂರನೇ  ದಿನ  ಆಕೆ  ವಿಚಾರಣೆಗೆ ಹಾಜರಾಗದೆ ವಕೀಲೆ ವೃಂದಾ ಗ್ರೋವರ್ ಅವರ ಸಹಾಯವನ್ನು  ತಮಗೆ ನಿರಾಕರಿಸಲಾಗಿತ್ತು ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News