ಮೋದಿ, ಶಾಗೆ ಕ್ಲೀನ್‌ ಚಿಟ್ ನೀಡಿದ ಚು.ಆಯೋಗದ ಆದೇಶ ದಾಖಲಿಸುವಂತೆ ಸುಪ್ರೀಂ ಸೂಚನೆ

Update: 2019-05-06 15:05 GMT

ಹೊಸದಿಲ್ಲಿ,ಮೇ.6: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಚುನಾವಣಾ ನೀತಿ ಸಂಹಿತೆ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿರುವ ಚುನಾವಣಾ ಆಯೋಗದ ಆದೇಶವನ್ನು ನ್ಯಾಯಾಲಯದಲ್ಲಿ ದಾಖಲಿಸುವಂತೆ ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್‌ಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.

ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಮತ್ತು ನ್ಯಾಯಾಧೀಶ ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ ಸದ್ಯ ದೇವ್ ಮನವಿಯನ್ನು ಮೇ 8ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಸುಶ್ಮಿತಾ ದೇವ್ ಅಸ್ಸಾಂನ ಸಿಲ್ಚರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆಯಾಗಿದ್ದಾರೆ. ಪ್ರಧಾನಿ ಮೋದಿ ಮತ್ತು ಶಾ ತಮ್ಮ ಚುನಾವಣಾ ಪ್ರಚಾರಗಳಲ್ಲಿ ಸಶಸ್ತ್ರಪಡೆಗಳನ್ನು ಉಲ್ಲೇಖಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಕಾಂಗ್ರೆಸ್ ದೂರಿನ ಬಗ್ಗೆ ಚುನಾವಣಾ ಆಯೋಗ ಅತಾರ್ಕಿಕ ಆದೇಶವನ್ನು ನೀಡಿ ದೂರನ್ನು ತಿರಸ್ಕರಿಸಿದೆ ಎಂದು ದೇವ್ ಪರ ವಾದಿಸಿದ ಹಿರಿಯ ವಕೀಲ ಎ.ಎಂ ಸಿಘ್ವಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಚುನಾವಣಾ ಆಯೋಗದ ಆದೇಶವನ್ನು ಉಲ್ಲೇಖಿಸಿರುವ ಹೆಚ್ಚುವರಿ ಅಫಿದಾವಿತನ್ನು ದಾಖಲಿಸುವಂತೆ ವಕೀಲರಿಗೆ ಸೂಚಿಸಿದೆ. ಕಳೆದ ತಿಂಗಳು ಲಾತೂರ್‌ನಲ್ಲಿ ಮತ್ತು ಕೇರಳದ ವಯನಾಡ್‌ನಲ್ಲಿ ಚುನಾವಣಾ ಭಾಷಣ ಮಾಡುವ ವೇಳೆ ಮೋದಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿ ನಾಯಕರ ವಿರುದ್ಧ ನೀಡಿರುವ ದೂರಿನ ಬಗ್ಗೆ ಆಯೋಗ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ತಾರತಮ್ಯದ ಸೂಚನೆಯಾಗಿದೆ ಮತ್ತು ಅದು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯ ಮೇಲೆ ಪರಿಣಾಮ ಬೀರುವುದರಿಂದ ಒಪ್ಪಲು ಸಾಧ್ಯವಿಲ್ಲ ಎಂದು ದೇವ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News