ಲಂಕಾ: ನೆಗೊಂಬೊದಲ್ಲಿ ಕ್ರೈಸ್ತರು-ಮುಸ್ಲಿಮರ ನಡುವೆ ಘರ್ಷಣೆ
ಕೊಲಂಬೊ, ಮೇ 6: ಈಸ್ಟರ್ ರವಿವಾರದಂದು ಆತ್ಮಹತ್ಯಾ ಬಾಂಬ್ ದಾಳಿ ನಡೆದ ಶ್ರೀಲಂಕಾದ ನೆಗೊಂಬೊ ಪಟ್ಟಣದಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರ ನಡುವೆ ಘರ್ಷಣೆಗಳು ಸಂಭವಿಸಿವೆ.
ಮುಸ್ಲಿಮರ ಒಡೆತನದ ಅಂಗಡಿಗಳು, ಮನೆಗಳು ಮತ್ತು ವಾಹನಗಳಿಗೆ ಹಾನಿ ಮಾಡಲಾಗಿದೆ.
ಕರ್ಫ್ಯೂ ಜಾರಿಗೊಳಿಸಲು ನೂರಾರು ಭದ್ರತಾ ಸಿಬ್ಬಂದಿ ನೆಗೊಂಬೊ ಪಟ್ಟಣ ಪ್ರವೇಶಿಸಿದ್ದಾರೆ.
ರಾಜಧಾನಿ ಕೊಲಂಬೊದಿಂದ 40 ಕಿಲೋಮೀಟರ್ ದೂರದಲ್ಲಿರುವ ನೆಗೊಂಬೊ ಪಟ್ಟಣದ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಎಪ್ರಿಲ್ 21ರಂದು ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಗಿತ್ತು.
ಈ ನಡುವೆ, ಶಾಂತಿ ಕಾಪಾಡುವಂತೆ ಶ್ರೀಲಂಕಾದ ರೋಮನ್ ಕೆಥೋಲಿಕ್ ಚರ್ಚ್ ಜನರಿಗೆ ಮನವಿ ಮಾಡಿದೆ ಹಾಗೂ ಮದ್ಯ ನಿಷೇಧಿಸುವಂತೆ ಸರಕಾರವನ್ನು ಕೋರಿದೆ.
‘‘ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿಗೆ ಹಾನಿ ಮಾಡಬಾರದು ಎಂದು ನಾನು ಎಲ್ಲ ಕೆಥೋಲಿಕ್ ಮತ್ತು ಕ್ರೈಸ್ತ ಸಹೋದರ ಮತ್ತು ಸಹೋದರಿಯರಿಗೆ ನಾನು ಮನವಿ ಮಾಡುತ್ತೇನೆ. ಅವರು ನಮ್ಮ ಸಹೋದರರಾಗಿದ್ದಾರೆ ಹಾಗೂ ನಮ್ಮ ಧಾರ್ಮಿಕ ಸಂಸ್ಕೃತಿಯ ಭಾಗವಾಗಿದ್ದಾರೆ’’ ಎಂದು ಕೊಲಂಬೊದ ಆರ್ಚ್‌ಬಿಶಪ್ ಕಾರ್ಡಿನಲ್ ಮಾಲ್ಕಮ್ ರಂಜಿತ್ ಹೇಳಿದ್ದಾರೆ.
‘‘ಹಾಗಾಗಿ, ಅವರಿಗೆ ಹಾನಿ ಮಾಡಬೇಡಿ ಹಾಗೂ ಶ್ರೀಲಂಕಾದಲ್ಲಿರುವ ಎಲ್ಲ ಸಮುದಾಯಗಳೊಂದಿಗೆ ಉತ್ತಮ ತಿಳುವಳಿಕೆ ಮತ್ತು ಸಂಬಂಧವನ್ನು ಹೊಂದಲು ಪ್ರಯತ್ನಿಸಿ’’ ಎಂಬುದಾಗಿ ದೇಶಕ್ಕೆ ನೀಡಿದ ವೀಡಿಯೊ ಸಂದೇಶವೊಂದರಲ್ಲಿ ಅವರು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಈಸ್ಟರ್ ರವಿವಾರದಂದು ಸಂಭವಿಸಿದ ಆತ್ಮಹತ್ಯಾ ಬಾಂಬ್ ಸ್ಫೋಟಗಳಿಂದಾಗಿ ಉಂಟಾದ ಸಾವು-ನೋವಿನ ಹೆಚ್ಚಿನ ಪಾಲು ನೆಗೊಂಬೊದಲ್ಲಿ ಉಂಟಾಗಿದೆ. ಅಲ್ಲಿನ ಸೇಂಟ್ ಸೆಬಾಸ್ಟಿಯನ್ಸ್ ಚರ್ಚ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 100ಕ್ಕೂ ಅಧಿಕ ಮಂದಿ ಕ್ರೈಸ್ತರು ಪ್ರಾಣ ಕಳೆದುಕೊಂಡಿದ್ದಾರೆ.
ಈಸ್ಟರ್ ರವಿವಾರ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ ಒಟ್ಟು 257 ಮಂದಿ ಮೃತಪಟ್ಟಿದ್ದಾರೆ ಹಾಗೂ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮಸೀದಿ ಧರ್ಮಗುರುಗಳೊಂದಿಗೆ ಕಾರ್ಡಿನಲ್ ಮಾತುಕತೆ
ಕೊಲಂಬೊದ ಆರ್ಚ್‌ಬಿಶಪ್ ಕಾರ್ಡಿನಲ್ ಮಾಲ್ಕಮ್ ರಂಜಿತ್ ಸೋಮವಾರ ನೆಗೊಂಬೊಗೆ ಭೇಟಿ ನೀಡಿ ಮಸೀದಿಯೊಂದರ ಧರ್ಮಗುರುಗಳೊಂದಿಗೆ ಮಾತುಕತೆ ನಡೆಸಿದರು ಎಂದು ಅವರ ವಕ್ತಾರ ಫಾದರ್ ಎಡ್ಮಂಡ್ ತಿಲಕರತ್ನೆ ತಿಳಿಸಿದರು.
ಅದೇ ವೇಳೆ, ಪಟ್ಟಣದಲ್ಲಿನ ಬಾರ್‌ಗಳನ್ನು ಮುಚ್ಚುವಂತೆ ಅವರು ಸರಕಾರಕ್ಕೆ ಮನವಿ ಮಾಡಿದರು.
ನೆಗೊಂಬೊ ಪಟ್ಟಣವು ಕೆಥೋಲಿಕ್ ಪ್ರಾಬಲ್ಯದ ಪಟ್ಟಣವಾಗಿದ್ದು, ‘ಲಿಟಲ್ ರೋಮ್’ (ಪುಟ್ಟ ರೋಮ್ ನಗರ) ಎಂಬುದಾಗಿ ಪ್ರಸಿದ್ಧವಾಗಿದೆ.
‘‘ತಾತ್ಕಾಲಿಕ ಕ್ರಮವಾಗಿ, ನೆಗೊಂಬೊ ಪಟ್ಟಣದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲು ಆದೇಶ ಹೊರಡಿಸುವಂತೆ ಕಾರ್ಡಿನಲ್ ಸರಕಾರಕ್ಕೆ ಮನವಿ ಮಾಡಿದ್ದಾರೆ’’ ಎಂದು ತಿಲಕರತ್ನೆ ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದರು.
ಟೆಲಿವಿಶನ್‌ನಲ್ಲಿ ಇನ್ನೊಮ್ಮೆ ಮನವಿ ಮಾಡಿದ ಕಾರ್ಡಿನಲ್, ಸಂಯಮ ಕಾಯ್ದುಕೊಳ್ಳುವಂತೆ ಕ್ರೈಸ್ತರು, ಬೌದ್ಧರು ಮತ್ತು ಮುಸ್ಲಿಮರಿಗೆ ಮನವಿ ಮಾಡಿದರು.