ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಸಮಿತಿ ವರದಿಯ ಪ್ರತಿ ಕೇಳಿದ ದೂರುದಾರೆ

Update: 2019-05-07 15:48 GMT

ಹೊಸದಿಲ್ಲಿ,ಮೇ.7: ಭಾರತೀಯ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಮಹಿಳೆ ಈ ಪ್ರಕರಣದ ವಿಚಾರಣೆ ನಡೆಸಿದ ಸಮಿತಿಯ ವರದಿಯ ಪ್ರತಿಯನ್ನು ನೀಡುವಂತೆ ಮನವಿ ಮಾಡಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ತ್ರಿಸದಸ್ಯ ಸಮಿತಿ ದೂರುದಾರೆಯ ಆರೋಪವನ್ನು ತಳ್ಳಿ ಹಾಕಿತ್ತು ಮತ್ತು ಈ ಪ್ರಕರದಲ್ಲಿ ಮಹಿಳೆ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಾಲಯದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದರು. ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಅಧಿಕಾರಿಗಳು ತಿಳಿಸಿದ್ದರು.

ಸಮಿತಿಯ ತೀರ್ಪಿನ ಬಗ್ಗೆ ಆಘಾತ ವ್ಯಕ್ತಪಡಿಸಿದ ದೂರುದಾರ ಮಹಿಳೆ, ನಾನು ಸವಿವರವಾದ ಅಫಿದಾವಿತ್ ಸಲ್ಲಿಸಿದ್ದರೂ, ಅಗತ್ಯ ಸಾಕ್ಷಿಗಳನ್ನು ನೀಡಿದ್ದರೂ ಮತ್ತು ಸ್ಪಷ್ಟ ಹಾಗೂ ನಿರಂತರ ಒಂದೇ ರೀತಿಯ ಹೇಳಿಕೆಯನ್ನು ನೀಡಿದ್ದರೂ ಸಮಿತಿಯು ನನ್ನ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿರುವುದು ಆಘಾತ ನೀಡಿದೆ ಎಂದು ತಿಳಿಸಿದ್ದರು.

ಮು.ನ್ಯಾ ರಂಜನ್ ಗೊಗೊಯಿಯವರಿಗೆ ವರದಿಯ ಪ್ರತಿಯನ್ನು ನೀಡಲು ಸಾಧ್ಯವಾಗಿದ್ದರೆ ನನಗೂ ಅದನ್ನು ಪಡೆದುಕೊಳ್ಳುವ ಹಕ್ಕಿದೆ ಎಂದು ಅಭಿಪ್ರಾಯಿಸಿರುವ ಮಹಿಳೆ, ಆಂತರಿಕ ವಿಚಾರಣಾ ಪ್ರಕ್ರಿಯೆಯ ನಿಯಮಗಳನ್ನು ನನಗೆ ಮತ್ತು ಸಾರ್ವಜನಿಕರಿಗೆ ಈ ವರದಿಯ ಬಗ್ಗೆ ತಿಳಿಯುವ ಹಕ್ಕನ್ನು ನಿರಾಕರಿಸುವ ಸಲುವಾಗಿ ಬಳಸಲಾಗುತ್ತಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News