ಐದನೇ ಬಾರಿ ಫೈನಲ್ ತಲುಪಿದ ಮುಂಬೈ

Update: 2019-05-07 17:51 GMT

ಚೆನ್ನೈ, ಮೇ 7: ಹನ್ನೆರಡನೆ ಆವೃತ್ತಿಯ ಐಪಿಎಲ್ ಟ್ವೆಂಟ-20 ಟೂರ್ನಿಯ ಮೊದಲ ಕ್ವಾಲಿಫೈಯರ್‌ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿದ ಮುಂಬೈ ಇಂಡಿಯನ್ಸ್ ಐದನೇ ಬಾರಿ ಫೈನಲ್ ಪ್ರವೇಶಿಸಿದೆ.
 ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 132 ರನ್‌ಗಳ ಸವಾಲನ್ನು ಪಡೆದ ಮುಂಬೈ ತಂಡ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 132 ರನ್ ಗಳಿಸಿ ಗೆಲುವು ದಾಖಲಿಸಿತು.
 ಸೂರ್ಯಕುಮಾರ್ ಯಾದವ್ ಔಟಾಗದೆ 71ರನ್(54ಎ, 10ಬೌ) ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಚೆನ್ನೈ ತಂಡಕ್ಕೆ ದೊಡ್ಡ ಮೊತ್ತದ ಸವಾಲನ್ನು ಸೇರಿಸಿ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ಯೋಜನೆ ಫಲ ನೀಡಲಿಲ್ಲ.
ಫೀಲ್ಡಿಂಗ್‌ನಲ್ಲೂ ಕೆಲವು ಆಟಗಾರರ ಕಳಪೆ ಪ್ರದರ್ಶನ ಚೆನ್ನೈ ತಂಡದ ಗೆಲುವಿಗೆ ಅಡ್ಡಿಯಾಯಿತು.
ಮುಂಬೈ ತಂಡ 3.2 ಓವರ್‌ಗಳಲ್ಲಿ 21 ರನ್ ಗಳಿಸುವಷ್ಟರಲ್ಲಿ ಆರಂಭಿಕ ದಾಂಡಿಗರಾದ ರೋಹಿತ್ ಶರ್ಮಾ(4) ಮತ್ತು ಕ್ವಿಂಟನ್ ಡಿ ಕಾಕ್ (8) ವಿಕೆಟ್‌ಗಳನ್ನು ಕೈ ಚೆಲ್ಲಿದರೂ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಮೂರನೇ ವಿಕೆಟ್‌ಗೆ ಜೊತೆಯಾಟದಲ್ಲಿ 80 ರನ್ ಸೇರಿಸಿ ತಂಡವನ್ನು ಆಧರಿಸಿದರು.
  28 ರನ್ ಗಳಿಸಿದ ಇಶಾನ್ ಕಿಶನ್ 13.5ನೇ ಓವರ್‌ನಲ್ಲಿ ಇಮ್ರಾನ್ ತಾಹಿರ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬಳಿಕ ಕ್ರೀಸ್‌ಗೆ ಆಗಮಿಸಿದ ಕೃನಾಲ್ ಪಾಂಡ್ಯ(0) ಖಾತೆ ತೆರೆಯದೆ ತಾಹಿರ್‌ಗೆ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದರು.
ಐದನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಮುರಿದ ಜೊತೆಯಾಟದಲ್ಲಿ 32 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಹಾರ್ದಿಕ್ ಪಾಂಡ್ಯ ಔಟಾಗದೆ13 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News