ಪತ್ರಕರ್ತರಿಗೆ ಲಂಚ ನೀಡುತ್ತಿರುವ ಬಿಜೆಪಿ: ಲೇಹ್ ಪ್ರೆಸ್ ಕ್ಲಬ್ ಆರೋಪ

Update: 2019-05-08 07:49 GMT

ಜಮ್ಮು, ಮೇ 8:  ತನ್ನ ಸದಸ್ಯ ಪತ್ರಕರ್ತರಿಗೆ ``ಹಣ ತುಂಬಿದ ಕವರುಗಳನ್ನು'' ನೀಡುವ ಮೂಲಕ ಬಿಜೆಪಿ ಲಂಚ ನೀಡಲು ಯತ್ನಿಸುತ್ತಿದೆ ಎಂದು ದಿ ಪ್ರೆಸ್ ಕ್ಲಬ್ ಲೇಹ್ ಆರೋಪಿಸಿದೆ. ಆದರೆ  ಬಿಜೆಪಿ ಈ ಆರೋಪಗಳನ್ನು ನಿರಾಕರಿಸಿದೆಯಲ್ಲದೆ ಈ ಆರೋಪಗಳು ‘ರಾಜಕೀಯ ಪ್ರೇರಿತ' ಎಂದು ಬಣ್ಣಿಸಿದೆ.

ಪ್ರೆಸ್ ಕ್ಲಬ್ ಕ್ಷಮೆ ಯಾಚಿಸದೇ ಇದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿಯೂ ರಾಜ್ಯ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಎಚ್ಚರಿಕೆ ನೀಡಿದ್ದಾರೆ.

“ಬಿಜೆಪಿ ಇಂತಹ ಆರೋಪಗಳನ್ನು ಸಹಿಸುವುದಿಲ್ಲ, ಪ್ರೆಸ್ ಕ್ಲಬ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸದೇ ಇದ್ದರೆ ಹೈಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ, ಆರೋಪಗಳು ಆಧಾರರಹಿತ ಹಾಗೂ ಅಪಪ್ರಚಾರದ ಉದ್ದೇಶ ಹೊಂದಿದೆ” ಎಂದು ರೈನಾ ಹೇಳಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ ಪ್ರೆಸ್ ಕ್ಲಬ್ ನ ಹಲವಾರು ಸದಸ್ಯರ ಸಹಿಗಳಿರುವ ಹಾಗೂ ಪತ್ರಕರ್ತರಿಗೆ ಕವರುಗಳಲ್ಲಿ ಹಣ ಆಫರ್ ಮಾಡಲು ಯತ್ನಿಸುತ್ತಿರುವ ರೈನಾ ಹಾಗೂ ಎಂಎಲ್‍ಸಿ ವಿಕ್ರಮ್ ರಂಧವಾ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರಿ ಬರೆದಿರುವ ಎರಡು ಪುಟದ ಪತ್ರವೊಂದು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇಂತಹ ಒಂದು ಪತ್ರವನ್ನು ಪ್ರೆಸ್ ಕ್ಲಬ್ ಬರೆದಿದೆ ಎಂದು ಪ್ರೆಸ್ ಕ್ಲಬ್, ಲೇಹ್ ಅಧ್ಯಕ್ಷ ಮೊರುಪ್ ಸ್ಟಾನ್ಝಿನ್ ದೃಢೀಕರಿಸಿದರೂ ತಾವಿನ್ನೂ ಪೊಲೀಸ್ ದೂರು ನೀಡಿಲ್ಲ ಎಂದರು.

``ನಾವು ಚುನಾವಣಾಧಿಕಾರಿಯೂ ಆಗಿರುವ ಲೇಹ್ ಜಿಲ್ಲಾಧಿಕಾರಿಗೆ ಶುಕ್ರವಾರ ದೂರು ನೀಡಿದ್ದೇವೆ. ಪತ್ರಿಕಾಗೋಷ್ಠಿಯ ನಂತರ ರಂಧವಾ ಹಣ ತುಂಬಿದ ಕವರುಗಳನ್ನು ಹಸ್ತಾಂತರಿಸಿದರು ಹಾಗೂ ಪತ್ರಕರ್ತರು ಅವುಗಳನ್ನು ಅವರಿಗೆ ಕೂಡಲೇ ವಾಪಸ್ ನೀಡಿದ್ದರು'' ಎಂದು ಅವರು ಹೇಳಿದ್ದಾರೆ.

ಆದರೆ ರೈನಾ ಮಾತ್ರ ಈ ಆರೋಪ ನಿರಾಕರಿಸಿದ್ದು, ಪತ್ರಿಕಾಗೋಷ್ಠಿ ಮುಗಿದ ಕೂಡಲೇ ಮೇ 2ರಂದು 1:30ಗೆ ತಾವು ಆ ಕೊಠಡಿ ಬಿಟ್ಟು ತೆರಳಿದ್ದಾಗಿ ಹಾಗೂ ತಮಗೆ  ಬೇರೊಂದು ಮಾಧ್ಯಮ ಸಂದರ್ಶನಕ್ಕೆ ಹೋಗಲಿತ್ತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News