ನಾಳೆಯೊಳಗೆ ತೇಜ್ ಬಹದ್ದೂರ್ ಅಪೀಲು ಪರಿಶೀಲಿಸಿ ಮಾಹಿತಿ ನೀಡಿ: ಚು. ಆಯೋಗಕ್ಕೆ ಸುಪ್ರೀಂ ಸೂಚನೆ

Update: 2019-05-08 08:40 GMT

ಹೊಸದಿಲ್ಲಿ, ಮೇ 8: ವಾರಣಾಸಿಯಿಂದ ತಾನು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದ ಕ್ರಮವನ್ನು ಪ್ರಶ್ನಿಸಿ ಮಾಜಿ ಬಿಎಸ್‍ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಸಲ್ಲಿಸಿರುವ ಅಪೀಲನ್ನು ಗುರುವಾರದೊಳಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಬುಧವಾರ ಸೂಚನೆ ನೀಡಿದೆ.

ಆರಂಭದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಯಾದವ್ ರನ್ನು ನಂತರ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.

ಚುನಾವಣಾಧಿಕಾರಿ ತನ್ನ ನಾಮಪತ್ರ ತಿರಸ್ಕರಿಸಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವಂತೆ ಯಾದವ್ ತನ್ನ ಅಪೀಲಿನಲ್ಲಿ ಕೋರಿದ್ದರು.

“ಗಡಿಯಲ್ಲಿ ದೇಶ ಕಾಯುತ್ತಿರುವ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವೀಡಿಯೋ ಪೋಸ್ಟ್ ಮಾಡಿದ ನಂತರ ಬಿಎಸ್‍ಎಫ್ ನಿಂದ ತೇಜ್ ಬಹದ್ದೂರ್ ವಜಾಗೊಂಡಿದ್ದರೂ ಅವರ ವಜಾ ಆದೇಶದಲ್ಲಿ ಎಲ್ಲಿಯೂ ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹಕ್ಕಾಗಿ ವಜಾಗೊಂಡಿದ್ದಾರೆಂದು ಹೇಳಿಲ್ಲ. ಬದಲಾಗಿ ತನಗೆ ನೀಡಿದ ಆಹಾರವನ್ನು ತಿನ್ನಲು ನಿರಾಕರಿಸಿದ್ದಕ್ಕೆ ವಜಾಗೊಳಿಸಲಾಗಿದೆ. ಆದರೂ ವಿಶ್ವಾಸದ್ರೋಹ ಅಥವಾ ಭ್ರಷ್ಟಾಚಾರಕ್ಕಾಗಿ ವಜಾಗೊಂಡಿಲ್ಲ ಎಂಬುದನ್ನು ದೃಢ ಪಡಿಸಲು ಪ್ರಮಾಣಪತ್ರ ಹಾಜರು ಪಡಿಸುವಂತೆ ಚುನಾವಣಾಧಿಕಾರಿ ಹೇಳಿದ್ದರು'' ಎಂದು ತೇಜ್ ಬಹದ್ದೂರ್ ವಕೀಲ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.

ತೇಜ್ ಬಹದ್ದೂರ್ ಮೇ 1ರಂದು ನಾಮಪತ್ರ ಸಲ್ಲಿಸಿದ್ದರೆ ಅವರು ಕೇಳಲಾದ ಪ್ರಮಾಣಪತ್ರ ನಿಗದಿತ ಅವಧಿಯೊಳಗೆ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಮೇ 6ರಂದು ನಾಮಪತ್ರ ತಿರಸ್ಕೃತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News