ರಾಜೀವ್ ಗಾಂಧಿ ವಿರುದ್ಧ ಮೋದಿ ಹೇಳಿಕೆ ಖಂಡಿಸಿ ಚು. ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದ ಯುವಕ

Update: 2019-05-08 09:21 GMT

ಅಮೇಥಿ, ಮೇ 8: ಜನರ ಭಾವನೆಗಳಿಗೆ ಘಾಸಿಯನ್ನುಂಟು ಮಾಡುವ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣಾ ಆಯೋಗ ಸೂಚನೆ ನೀಡಬೇಕೆಂದು ಕೋರಿ ಅಮೇಥಿಯ ಯುವಕನೊಬ್ಬ ರಕ್ತದಿಂದ ಬರೆದ ಪತ್ರವನ್ನು ಆಯೋಗಕ್ಕೆ ಕಳುಹಿಸಿದ್ದಾನೆ.

ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ಪ್ರಧಾನಿ ನೀಡಿದ ಹೇಳಿಕೆಗಳಿಂದ ತನಗೆ ತೀವ್ರ ನೋವಾಗಿದೆ ಎಂದು ಈ ಪತ್ರದಲ್ಲಿ ಅಮೇಥಿಯ ಶಾಹಘರ್ ನ ಮನೋಜ್ ಕಶ್ಯಪ್ ಬರೆದಿದ್ದಾರೆ.

“ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮತದಾನ ಮಾಡಲು ಅರ್ಹವಾಗುವ ವಯಸ್ಸನ್ನು 18ಕ್ಕೆ ಇಳಿಸಿದ್ದರು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು ಹಾಗೂ ದೇಶದಲ್ಲಿ ಕಂಪ್ಯೂಟರ್ ಕ್ರಾಂತಿ ತಂದಿದ್ದರು, ಮಾಜಿ ಪ್ರಧಾನಿ ದಿ ಅಟಲ್ ಬಿಹಾರಿ ವಾಜಪೇಯಿ ಕೂಡ ರಾಜೀವ್ ಗಾಂಧಿ ಅವರನ್ನು ಲೇಖನವೊಂದರಲ್ಲಿ ಶ್ಲಾಘಿಸಿದ್ದರು'' ಎಂದು ಪತ್ರದಲ್ಲಿ ಬರೆಯಲಾಗಿದೆ.

``ಅಮೇಥಿಯ ಜನರಿಗೆ ರಾಜೀವ್ ಗಾಂಧಿಯನ್ನು ಅವಮಾನಿಸುವವರು ಅವರನ್ನು ಹತ್ಯೆಗೈದವರಿಗೆ ಸಮ'' ಎಂದು ಖಾರವಾಗಿ ಪ್ರತಿಕ್ರಿಯಿಸಿರುವ ಕಶ್ಯಪ್, “ರಾಜೀವ್ ಗಾಂಧಿ ಅಮೇಠಿಯ ಹಾಗೂ ದೇಶದ ಜನರ ಹೃದಯಗಳಲ್ಲಿ ನೆಲೆಸಿದ್ದಾರೆ. ಇಂತಹ ನಾಯಕನ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡದಂತೆ ಪ್ರಧಾನಿಗೆ ಸೂಚಿಸಬೇಕು” ಎಂದಿದ್ದಾರೆ.

ತನ್ನ ಪತ್ರದ ಹಿಂದೆ ಯಾವುದೇ ರಾಜಕೀಯವಿಲ್ಲ ಹಾಗೂ ದಿವಂಗತ ರಾಜೀವ್ ಗಾಂಧಿಯೊಂದಿಗೆ ತನಗೆ ಭಾವನಾತ್ಮಕ ಸಂಬಂಧವಿದೆ ಎಂದು ಕಶ್ಯಪ್ ಹೇಳಿಕೊಂಡಿದ್ದಾರೆ. ಈ ಪತ್ರವನ್ನು ಕಾಂಗ್ರೆಸ್ ಎಂಎಲ್‍ಸಿ ದೀಪಕ್ ಸಿಂಗ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

``ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಭ್ರಷ್ಟಾಚಾರಿ ನಂ 1 ಆಗಿ ಅಂತ್ಯ ಕಂಡರು,'' ಎಂದು ಪ್ರಧಾನಿ ಇತ್ತೀಚೆಗೆ ಚುನಾವಣಾ ರ್ಯಾಲಿಯಲ್ಲಿ ಹೇಳಿರುವುದು ಭಾರೀ ವಿವಾದಕ್ಕೀಡಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News