ಸಿಜೆಐ ವಿರುದ್ಧ ಮಹಿಳೆ 30 ಪುರಾವೆಗಳನ್ನು ನೀಡಿದ್ದರು: ಹಿರಿಯ ವಕೀಲ ಪ್ರಶಾಂತ್ ಭೂಷಣ್

Update: 2019-05-08 10:33 GMT

ಹೊಸದಿಲ್ಲಿ, ಮೇ 8: “ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ಲೈಂಗಿಕ ಕಿರುಕುಳ ದೂರನ್ನು ಸಲ್ಲಿಸಿದ್ದ ಮಹಿಳೆ ಕನಿಷ್ಠ 30 ದಾಖಲೆಗಳನ್ನು ಪುರಾವೆಯಾಗಿ ನೀಡಿರುವುದರಿಂದ ಹಾಗೂ ಆಕೆ ಮಾಡಿರುವ ಆರೋಪಗಳನ್ನು ಸುಪ್ರೀಂ ಕೋರ್ಟ್ ಆಂತರಿಕ ಸಮಿತಿ ತಿರಸ್ಕರಿಸಿರುವುದರಿಂದ ಆಕೆ ಈಗ ಬಹಳಷ್ಟು ನಿರಾಸೆಗೊಂಡಿದ್ದಾರೆ” ಎಂದು ವಕೀಲ  ಪ್ರಶಾಂತ್ ಭೂಷಣ್ ಹೇಳಿದ್ದಾರೆ.

“ದೂರಿನ ಜತೆ ನೀಡಲಾಗಿರುವ ಪುರಾವೆಗಳಲ್ಲಿ ಆಕೆ ಠಾಣಾಧಿಕಾರಿ ಜತೆ ನಡೆಸಿದ ಸಂವಾದದ ವೀಡಿಯೋ ದಾಖಲೆ  ಕೂಡ ಸೇರಿದೆ, ಆದರೆ ಇವುಗಳನ್ನು ತನಿಖಾ ಸಮಿತಿ ಹೇಗೆ  ಪರಿಶೀಲಿಸಿದೆ ಎಂದು ತಿಳಿದಿಲ್ಲ, ಇಷ್ಟು ಬೇಗ ಹೇಗೆ ತೀರ್ಮಾನಕ್ಕೆ ಬರಲಾಗಿದೆ ಎಂಬುದು ಅಚ್ಚರಿ'' ಎಂದು ಭೂಷಣ್ ಹೇಳಿದರು.

ಸದ್ಯ ದೂರುದಾರೆಯ ಮುಂದೆ ಹೆಚ್ಚಿನ ಆಯ್ಕೆಗಳಿಲ್ಲ. ಹೆಚ್ಚೆಂದರೆ ಆಕೆ ಸಿಜೆಐ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಹುದಾದರೂ ಅದಕ್ಕಾಗಿ ಆಕೆಗೆ ರಾಷ್ಟ್ರಪತಿಗಳ ಅನುಮತಿ ಪಡೆಯಬೇಕಿದೆ ಎಂದರು.

“ಈ ಸಂದರ್ಭ ಆಕೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ದೊರೆಯಬಹುದೇ ಹಾಗೂ ಆಕೆ ರಾಷ್ಟ್ರತಿಗೆ ಮನವಿ ಮಾಡಲಿದ್ದಾರೆಯೇ ಎಂಬುದರ ಬಗ್ಗೆ ಈಗ ಹೇಳಲು ಸಾಧ್ಯವಿಲ್ಲ” ಎಂದು ಭೂಷಣ್ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟಿನ ಆಂತರಿಕ ತನಿಖಾ ಸಮಿತಿ ತನ್ನ ವರದಿಯ ಪ್ರತಿಯನ್ನು ದೂರುದಾರೆಗೆ ನೀಡಲು ನಿರಾಕರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಲೈಂಗಿಕ ಕಿರುಕುಳ ತಡೆ ಕಾಯಿದೆಯನ್ವಯ ವರದಿಯನ್ನು ದೂರುದಾರೆಗೆ ನೀಡಬೇಕು. ಆದರೆ ಈ ಪ್ರಕರಣದಲ್ಲಿ ಅವರು ಅದರ ಪ್ರತಿಯನ್ನು ಮುಖ್ಯ ನ್ಯಾಯಮೂರ್ತಿಗೆ ನೀಡಿರುವಾಗ ದೂರುದಾರೆಗೆ ಏಕೆ ನೀಡಬಾರದು?'' ಎಂದು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಸಮಿತಿ ಆರ್‍ ಟಿಐ ಪೂರ್ವ ಯುಗದ ಇಂದಿರಾ ಜೈಸಿಂಗ್ ಪ್ರಕರಣವನ್ನು ನೆಪವಾಗಿಸಿದೆ ಎಂದರು.

“ಆದರೆ ಆ ಪ್ರಕರಣದಲ್ಲಿ ಮೂರನೇ ವ್ಯಕ್ತಿ ವರದಿಯ ಪ್ರತಿ ಕೇಳಿದ್ದರೆ ಇಲ್ಲಿ ದೂರುದಾರೆಯೇ ಕೇಳಿದ್ದಾರೆ. ಯಾವ ಆಧಾರದಲ್ಲಿ ಆಕೆಯ ದೂರನ್ನು ಆಧಾರರಹಿತ ಎಂದು ಹೇಳಲಾಗಿದೆ ಎಂದು ತಿಳಿಯುವ ಹಕ್ಕು ಆಕೆಗಿದೆ'' ಎಂದು ಭೂಷಣ್ ಹೇಳಿದ್ದಾರೆ.

ವರದಿಯ ಪ್ರತಿ ನೀಡದೇ ಇದ್ದರೆ ಅದರ ವಿರುದ್ಧ ಆಕೆ ನ್ಯಾಯಾಲಯಕ್ಕೆ ಕೂಡ ಮೊರೆ ಸಲ್ಲಿಸಲು ಅವಕಾಶವಿದೆ ಎಂದೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News