ಫನಿ ಚಂಡ ಮಾರುತ: ಸಾವಿನ ಸಂಖ್ಯೆ 37ಕ್ಕೆ ಏರಿಕೆ

Update: 2019-05-08 15:12 GMT

ಭುವನೇಶ್ವರ, ಮೇ 8: ಫನಿ ಚಂಡಮಾರುತ ಸಂತ್ರಸ್ತ ಪುರಿ ಹಾಗೂ ಖುದ್ರಾ ಜಿಲ್ಲೆಗಳಲ್ಲಿ ವಿದ್ಯುತ್ ಹಾಗೂ ಟೆಲಿಕಾಂ ಸೇವೆ ಮರು ಸ್ಥಾಪಿಸಲು ಒಡಿಶಾ ಸರಕಾರ ಕೇಂದ್ರ ಸರಕಾರದ ನೆರವು ಕೋರಿದೆ. ಕತಕ್ ಜಿಲ್ಲೆಯಲ್ಲಿ ಮತ್ತಿಬ್ಬರು ಸಾವನ್ನಪ್ಪುವ ಮೂಲಕ ಫನಿ ಚಂಡಮಾರುತದಿಂದಿಂದ ಸಾವನ್ನಪ್ಪಿದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

 ಈ ಜಿಲ್ಲೆಯಲ್ಲಿ ವಿದ್ಯುತ್, ಕುಡಿಯುವ ನೀರು ಹಾಗೂ ಟೆಲಿಕಾಂ ಸೌಲಭ್ಯಗಳನ್ನು ಮರು ಸ್ಥಾಪಿಸುವ ಕಾರ್ಯ ಮುಂದುವರಿದಿದೆ. ಪುರಿ ಜಿಲ್ಲೆಯಲ್ಲಿ 21 ಮಂದಿ, ಕತಕ್ ಜಿಲ್ಲೆಯಲ್ಲಿ 5 ಮಂದಿ, ಜೈಪುರ ಹಾಗೂ ಮಯೂರ್‌ಭಂಜ್ ಜಿಲ್ಲೆಗಳಲ್ಲಿ ತಲಾ ನಾಲ್ಕು ಮಂದಿ, ಕೇಂದ್ರಪಾರದಲ್ಲಿ ಮೂರು ಮಂದಿ ಮೃತಪಟ್ಟಿರುವುದಾಗಿ ವಿಶೇಷ ಪರಿಹಾರ ಆಯುಕ್ತ ಬಿ.ಪಿ. ಸೇಥಿ ಹೇಳಿದ್ದಾರೆ.

 ‘‘ಫನಿ ಚಂಡಮಾರುತಕ್ಕೆ ಅತಿ ಹೆಚ್ಚು ಬಾಧಿತ ಜಿಲ್ಲೆಗಳಾದ ಪುರಿ ಹಾಗೂ ಖುರ್ದಾದಲ್ಲಿ ವಿದ್ಯುತ್ ಸಂಪರ್ಕ ಮರು ಸ್ಥಾಪಿಸಲು ಒಡಿಶಾಕ್ಕೆ ನೆರವು ನೀಡಲು ಕೌಶಲ್ಯಯುತ ಮಾನವ ಸಂಪನ್ಮೂಲ ಪೂರೈಸುವಂತೆ ಕೇಂದ್ರದಲ್ಲಿ ನಾವು ಮನವಿ ಮಾಡಿದ್ದೇವೆ’’ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಮುಖ್ಯ ಕಾರ್ಯದರ್ಶಿ ಎ.ಪಿ. ಪಧಿ ತಿಳಿಸಿದರು.

 ಡೀಸೆಲ್ ಜನರೇಟರ್‌ಗಳನ್ನು ಬಳಸಿ ಪುರಿ ಹಾಗೂ ಭುವನೇಶ್ವರದಲ್ಲಿ ಸರಕಾರ ನೀರು ಪೂರೈಕೆ ಮಾಡಲಿದೆ. ವಿದ್ಯುತ್ ಮೂಲಭೂತ ವ್ಯವಸ್ಥೆ ಸಾಮೂಹಿಕವಾಗಿ ಧ್ವಂಸಗೊಂಡಿರುವುದರಿಂದ ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಸವಾಲಿನದ್ದಾಗಲಿದೆ ಎಂದು ಪಧಿ ಹೇಳಿದ್ದಾರೆ. ನೆರೆಯ ರಾಜ್ಯಗಳಾದ ಪಶ್ಚಿಮಬಂಗಾಳ, ತೆಲಂಗಾಣ, ಆಂಧ್ರಪ್ರದೇಶದಿಂದ 5 ಸಾವಿರ ಕುಶಲ ಕಾರ್ಮಿಕರನ್ನು ಕಳುಹಿಸಿಕೊಂಡುವಂತೆ ಒಡಿಶಾ ಕೇಂದ್ರ ಸರಕಾರದಲ್ಲಿ ಮನವಿ ಮಾಡಿದೆ ಎಂದು ಪಧಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News