33 ರೂ.ಗಾಗಿ 2 ವರ್ಷ ಹೋರಾಟ ನಡೆಸಿದ ಇಂಜಿನಿಯರ್ !

Update: 2019-05-08 17:37 GMT

ಜೈಪುರ, ಮೇ 8: ಜಿಎಸ್‌ಟಿ ಜಾರಿಗೊಳ್ಳುವ ಮೊದಲೇ ತಾನು ಟಿಕೆಟ್‌ನ್ನು ರದ್ದು ಮಾಡಿದ್ದರೂ ಭಾರತೀಯ ರೈಲ್ವೆಯು ಸೇವಾ ತೆರಿಗೆಯಾಗಿ ತನ್ನಿಂದ ಪಡೆದುಕೊಂಡಿದ್ದ 33 ರೂ.ಗಳನ್ನು ವಾಪಸ್ ಪಡೆಯಲು ರಾಜಸ್ಥಾನದ ಕೋಟಾ ನಿವಾಸಿ ಇಂಜಿನಿಯರ್ ಸುಜೀತ್ ಸ್ವಾಮಿ(30) ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರು ಎರಡು ವರ್ಷಗಳ ಕಾಲ ಪಟ್ಟು ಬಿಡದೆ ಹೋರಾಡಿದ್ದರು.

ಸ್ವಾಮಿ ಜು.2ರಂದು ಕೋಟಾದಿಂದ ಹೊಸದಿಲ್ಲಿಗೆ ಪ್ರಯಾಣಿಸಲು ಜಿಎಸ್‌ಟಿ ಜಾರಿಗೊಳ್ಳುವ ಮೊದಲೇ 2017,ಎಪ್ರಿಲ್‌ನಲ್ಲಿ 765 ರೂ.ಗಳನ್ನು ತೆತ್ತು ಟಿಕೆಟ್ ಅನ್ನು ಬುಕ್ ಮಾಡಿದ್ದರು. ಆದರೆ ಅವರ ಟಿಕೆಟ್ ವೇಟಿಂಗ್ ಲಿಸ್ಟ್‌ನಲ್ಲಿದ್ದರಿಂದ ಅದನ್ನು ರದ್ದುಗೊಳಿಸಿದ್ದರು ಮತ್ತು ಐಆರ್‌ಸಿಟಿಸಿ ಅವರಿಗೆ 665 ರೂ.ಗಳನ್ನು ವಾಪಸ್ ಮಾಡಿತ್ತು.

ವೇಟಿಂಗ್ ಲಿಸ್ಟ್‌ನ ಟಿಕೆಟ್ ರದ್ದು ಮಾಡಿದ್ದಕ್ಕಾಗಿ 65 ರೂ.ಬದಲಿಗೆ 100 ರೂ.ಗಳನ್ನು ಕಡಿತಗೊಳಿಸಲಾಗಿತ್ತು. ಜಿಎಸ್‌ಟಿ ಜಾರಿಗೊಳ್ಳುವ ಮೊದಲೇ ಸ್ವಾಮಿ ಟಿಕೆಟ್‌ನ್ನು ರದ್ದು ಮಾಡಿದ್ದರೂ 35 ರೂ.ಗಳ ಹೆಚ್ಚುವರಿ ಮೊತ್ತವನ್ನು ಸೇವಾ ತೆರಿಗೆಯನ್ನಾಗಿ ಮುರಿದುಕೊಳ್ಳಲಾಗಿತ್ತು. ಆಗಿನಿಂದಲೂ 35 ರೂ.ಗಳ ಮರುಪಾವತಿಗಾಗಿ ಸ್ವಾಮಿ ಐಆರ್‌ಸಿಟಿಸಿಯ ಬೆನ್ನ ಹಿಂದೆ ಬಿದ್ದಿದ್ದರು ಮತ್ತು ಅವರಿಗೆ ಹಣವನ್ನು ಮರುಪಾವತಿಸುವುದಾಗಿ ಕೇವಲ ಭರವಸೆಗಳನ್ನಷ್ಟೇ ನೀಡಲಾಗುತ್ತಿತ್ತು.

ಸ್ವಾಮಿ ಆರ್‌ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿದ್ದ ಐಆರ್‌ಸಿಟಿಸಿ,ರೈಲ್ವೆ ಸಚಿವಾಲಯದ ಸೂಚನೆಯಂತೆ ಜಿಎಸ್‌ಟಿ ಜಾರಿಗೆ ಮುನ್ನ ಬುಕ್ ಮಾಡಿದ ಟಿಕೆಟ್‌ನ್ನು ಜಿಎಸ್‌ಟಿ ಜಾರಿಯ ಬಳಿಕ ರದ್ದುಗೊಳಿಸಿದರೆ ಬುಕ್ ಮಾಡಿದ ಸಂದರ್ಭದಲ್ಲಿ ಪಾವತಿಸಲಾದ ಸೇವಾ ತೆರಿಗೆಯನ್ನು ಮರಳಿಸಲಾಗುವುದಿಲ್ಲ. ಹೀಗಾಗಿ 65 ರೂ.ಶುಲ್ಕದ ಜೊತೆಗೆ 35 ರೂ.ಸೇವಾ ತೆರಿಗೆಯನ್ನು ವಿಧಿಸಲಾಗಿದೆ ಎಂದು ತಿಳಿಸಿತ್ತು.

 ಜಿಎಸ್‌ಟಿ ಜಾರಿಗೆ ಬಂದ 2017,ಜು.1ರ ಮೊದಲು ಬುಕ್ ಮಾಡಿ ರದ್ದು ಮಾಡಿದ ಟಿಕೆಟ್‌ಗಳಿಗೆ ಸೇವಾ ತೆರಿಗೆಯನ್ನು ವಿಧಿಸದಿರಲು ನಂತರ ನಿರ್ಧರಿಸಲಾಗಿದೆ ಎಂದೂ ಉತ್ತರವು ತಿಳಿಸಿತ್ತು.

ಅಂತೂ 2019,ಮೇ 1ರಂದು 33 ರೂ.ಗಳು ಸ್ವಾಮಿಯ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಅವರಿಗೆ ಮರುಪಾವತಿಸಬೇಕಿದ್ದ 35 ರೂ.ಗಳಲ್ಲೂ 2 ರೂ.ಗಳನ್ನು ಐಆರ್‌ಸಿಟಿಸಿ ಕಡಿತಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News