ಪ್ರವಾಸಕ್ಕಾಗಿ ರಾಜೀವ್ ಗಾಂಧಿ ‘ಐಎನ್ ಎಸ್ ವಿರಾಟ್’ ಬಳಸಿದ್ದರು ಎಂದು ಮೋದಿ ಸುಳ್ಳು ಹೇಳಿದರೇ?

Update: 2019-05-09 11:45 GMT

ಹೊಸದಿಲ್ಲಿ, ಮೇ 9: ಮಾಜಿ ಪ್ರಧಾನಿ ರಾಜೀವ್ ಗಾಂಧಿ ತಮ್ಮ ಕುಟುಂಬದೊಂದಿಗೆ ಪ್ರವಾಸ ತೆರಳಲು ಐಎನ್‍ಎಸ್ ವಿರಾಟ್ ಅನ್ನು ಖಾಸಗಿ ಟ್ಯಾಕ್ಸಿಯಾಗಿ ಬಳಸಿದ್ದಾರೆಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಆಗಿನ ಲಕ್ಷದ್ವೀಪ ಆಡಳಿತಾಧಿಕಾರಿ ವಜಾಹತ್ ಹಬೀಬುಲ್ಲಾ, ಐಎನ್‍ಎಸ್ ವಿರಾಟ್ ಯುದ್ಧ ನೌಕೆಯನ್ನು ಲಕ್ಷದ್ವೀಪದಲ್ಲಿ ನಿಲ್ಲಿಸಲಾಗಿತ್ತಾದರೂ  ಗಾಂಧಿ ಕುಟುಂಬ ಆ ನೌಕೆಯಲ್ಲಿ ರಜಾ ಕಾಲವನ್ನು ಆನಂದಿಸಿರಲಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ ಎಂದು indiatoday.in ವರದಿ ಮಾಡಿದೆ.

ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ತಮ್ಮ ಪತ್ನಿ ಸೋನಿಯಾ ಗಾಂಧಿಯೊಂದಿಗೆ ಸರಕಾರಿ ಹೆಲಿಕಾಪ್ಟರಿನಲ್ಲಿ ಲಕ್ಷದ್ವೀಪಕ್ಕೆ ಬಂದಿದ್ದನ್ನು ಮಾಜಿ ಐಎಎಸ್ ಅಧಿಕಾರಿಯಾಗಿರುವ ಹಬೀಬುಲ್ಲಾ ನೆನಪಿಸಿಕೊಂಡಿದ್ದಾರೆ. ಪ್ರಧಾನಿಯ ಭದ್ರತೆಗಾಗಿ ಐಎನ್‍ಎಸ್ ವಿರಾಟ್ ಯುದ್ಧನೌಕೆಯನ್ನು ಅಲ್ಲಿಯೇ ನಿಲ್ಲಿಸಲಾಗಿತ್ತು, ಸಾಗರದ ಮಧ್ಯದಲ್ಲಿ ಪ್ರಧಾನಿಯ ಭದ್ರತೆಗಾಗಿ ಯುದ್ಧ ನೌಕೆಯಲ್ಲದೆ ಬೇರೆ ಆಯ್ಕೆಗಳಿರಲಿಲ್ಲ ಎಂದು ಅವರು ಹೇಳಿದರು.

“ರಾಜೀವ್ ಗಾಂಧಿ ಲಕ್ಷದ್ವೀಪಕ್ಕೆ ಅಧಿಕೃತ ಸಭೆ ನಡೆಸಲು ತೆರಳಿ ನಂತರ ಅಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದಾಗ ಅವರ ಅತಿಥಿಗಳೂ ಅವರನ್ನು ಸೇರಿಕೊಂಡರು. ಯಾವುದೇ ವಿದೇಶಿ ಪ್ರಜೆ ಯಾ ಅತಿಥಿಗಳನ್ನು ಐಎನ್‍ಎಸ್ ವಿರಾಟ್ ಒಳಗೆ ಅನುಮತಿಸಿರಲಿಲ್ಲ” ಎಂದು ಹೇಳಿದ ಅವರು, “ಪ್ರಧಾನಿ ನರೇಂದ್ರ ಮೋದಿ ಈಗ ಈ ವಿಚಾರವನ್ನು ಎತ್ತಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ. ಚುನಾವಣಾ ಆಯೋಗ ಈ ವಿಚಾರ ಗಮನಿಸಬೇಕೆಂದು ನಾನು ಬಯಸುತ್ತೇನೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News