'ರಾಜೀವ್ ಗಾಂಧಿ ಯಾವುದೇ ಹಡಗನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿಲ್ಲ'

Update: 2019-05-09 16:44 GMT

ಹೊಸದಿಲ್ಲಿ, ಮೇ 9: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಮ್ಮ ರಜಾಕಾಲದ ವೈಯುಕ್ತಿಕ ಪ್ರವಾಸಕ್ಕೆ ಐಎನ್‌ಎಸ್ ವಿರಾಟ್ ಅನ್ನು ಬಳಸಿದರು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಪಾದನೆ ನಿರಾಕರಿಸಿರುವ ನೌಕಾ ಪಡೆ ಸಿಬ್ಬಂದಿಯ ಮಾಜಿ ವರಿಷ್ಠ ಅಡ್ಮಿರಲ್ ಎಲ್. ರಾಮ್‌ದಾಸ್ (ನಿವೃತ್ತ), ರಾಜೀವ್ ಗಾಂಧಿ ಅವರು ವೈಯುಕ್ತಿಕವಾಗಿ ಯಾವುದೇ ಹಡಗನ್ನು ಬಳಸಿಲ್ಲ ಎಂದಿದ್ದಾರೆ.

ಪ್ರಧಾನಿ ಹಾಗೂ ಅವರ ಪತ್ನಿ ತುರ್ತು ವೈದ್ಯಕೀಯ ಸೇವೆ ಪಡೆಯಲು ಕವರತ್ತಿ ದ್ವೀಪದಲ್ಲಿ ಒಂದು ಚಿಕ್ಕ ಹೆಲಿಕಾಪ್ಟರ್ ಅನ್ನು ಇರಿಸಲಾಗಿತ್ತು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

ಐಎನ್‌ಎಸ್ ವಿರಾಟ್‌ನ ಆಗಿನ ಕ್ಯಾಪ್ಟನ್ ಹಾಗೂ ಕಮಾಂಡಿಂಗ್ ಅಧಿಕಾರಿ ವಿ. ಅಡ್ಮಿರಲ್ ಪಶ್ರಿಚಾ, ಐಎನ್‌ಐಸ್‌ನ ಜೊತೆಗಿದ್ದ ಐಎನ್‌ಎಸ್ ವಿಂದ್ಯಾಗಿರಿಯ ಕಮಾಂಡಿಂಗ್ ಅಧಿಕಾರಿ ಅಡ್ಮಿರಲ್ ಅರುಣ್ ಪ್ರಕಾಶ್, ಐಎನ್‌ಎಸ್ ಗಂಗಾದ ಕಮಾಂಡಿಂಗ್ ಅಧಿಕಾರಿ ವೈಸ್ ಅಡ್ಮಿರಲ್ ಮಡಂಜಿತ್ ಸಿಂಗ್ ಅವರ ಲಿಖಿತ ಪ್ರತಿಕ್ರಿಯೆಯನ್ನು ಗಮನಕ್ಕೆ ತರುತ್ತಿದ್ದೇನೆ. ಲಕ್ಷದ್ವೀಪದ ನೌಕಾ ಪಡೆಯ ಉಸ್ತುವಾರಿ ವಹಿಸಿಕೊಂಡಿದ್ದ ಆಗಿನ ಅಧಿಕಾರಿಯ ಟಿಪ್ಪಣಿಯನ್ನು ಕೂಡ ಉಲ್ಲೇಖಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

1987 ಡಿಸೆಂಬರ್‌ನಲ್ಲಿ ನಡೆದ ಘಟನೆಯ ಮೇಲೆ ಬೆಳಕು ಬೀರಿದ ಪತ್ರಿಕಾ ಹೇಳಿಕೆಯಲ್ಲಿ ರಾಮದಾಸ್, ದ್ವೀಪ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಲು ರಾಜೀವ್ ಗಾಂಧಿ, ಅವರ ಪತ್ನಿ ಸೋನಿಯಾ ಗಾಂಧಿ ತಿರುವನಂತಪುರದಿಂದ ಐಎನ್‌ಎಸ್ ವಿರಾಟ್ ಮೂಲಕ ಲಕ್ಷದ್ವೀಪಕ್ಕೆ ಪ್ರಯಾಣಿಸಿದ್ದರು ಎಂದಿದ್ದಾರೆ.

ಇದನ್ನು ದೃಢಪಡಿಸಲು ಭಾವಚಿತ್ರವಿದೆ. ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಅವರು ಸ್ಥಳೀಯರನ್ನು ಭೇಟಿಯಾಗಲು ಇತರ ದ್ವೀಪಗಳಿಗೆ ಹೆಲಿಕಾಪ್ಟರ್ ಮೂಲಕ ಪ್ರವಾಸ ಮಾಡಿದ್ದಾರೆ ಎಂದು ರಾಮ್‌ದಾಸ್ ತಿಳಿಸಿದ್ದಾರೆ.

ಉಪ ಅಡ್ಮಿರಲ್ ವಿನೋದ್ ಪಶ್ರಿಚಾ ಹೇಳಿಕೆ

ರಜಾಕಾಲದಲ್ಲಿ ಕುಟುಂಬ ಲಕ್ಷದ್ವೀಪಕ್ಕೆ ತೆರಳಲು ನೌಕಾ ಪಡೆಯ ವಿಮಾನ ವಾಹಕ ಐಎನ್‌ಎಸ್ ವಿರಾಟ್ ಅನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಳಸಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತದ್ವಿರುದ್ಧವಾದ ಪ್ರತಿಪಾದನೆಯನ್ನು ನೌಕಾ ಪಡೆಯ ನಿವೃತ್ತ ಅಧಿಕಾರಿಗಳ ಗುಂಪೊಂದು ಮಾಡಿದೆ

 ರಾಜೀವ್ ಗಾಂಧಿ ಅವರು ದ್ಪೀಪದ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪಾಲ್ಗೊಳ್ಳಲು ಲಕ್ಷದ್ವೀಪಕ್ಕೆ ತೆರಳಿದ್ದರು. ರಜಾಕಾಲದ ಪ್ರವಾಸದ ಹಿನ್ನೆಲೆಯಲ್ಲಿ ತೆರಳಿರಲಿಲ್ಲ. ಅವರೊಂದಿಗೆ ಪತ್ನಿ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ, ಇಬ್ಬರು ಐಎಎಸ್ ಅಧಿಕಾರಿಗಳು ಹಾಗೂ ಐಎನ್‌ಎಸ್ ವಿರಾಟ್‌ನ ಕಮಾಂಡರ್ ಆಗಿದ್ದ ಉಪ ಅಡ್ಮಿರಲ್ (ನಿವೃತ್ತ) ವಿನೋದ್ ಪಶ್ರಿಚಾ ಇದ್ದರು ಅದು ಹೇಳಿದೆ.

 ಅಮಿತಾಬಚ್ಚನ್ ಅಥವಾ ಸೋನಿಯಾ ಗಾಂಧಿ ಅವರ ಹೆತ್ತವರು ಹಡಗಿನಲ್ಲಿ ಇದ್ದರು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಪಾದನೆ ತಿರಸ್ಕರಿಸಿರುವ ಉಪ ಅಡ್ಮಿರಲ್ ಪಶ್ರಿಚಾ ಅವರು, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇಬ್ಬರು ಐಎಎಸ್ ಅಧಿಕಾರಿಗಳು ಹೊರತುಪಡಿಸಿದರೆ, ಬೇರೆ ಯಾರೂ ಇರಲಿಲ್ಲ. ಸಶಸ್ತ್ರ ಸೇನಾ ಪಡೆಯನ್ನು ರಾಜಕೀಕರಣಗೊಳಿಸುವುದು ತಪ್ಪು. ಅದು ಸ್ವೀಕಾರಾರ್ಹವಲ್ಲ ಎಂದರು.

ನಾವು ತಿರುವನಂತಪುರದಿಂದ ಪ್ರಯಾಣ ಆರಂಭಿಸಿದೆವು. ತಿರುವನಂತಪುರದಲ್ಲಿ ವಿರಾಟ್ ನಿಲ್ಲಲು ಬಂದರು ಇಲ್ಲದೇ ಇದ್ದುದರಿಂದ ನಮ್ಮನ್ನು ಹೆಲಿಕಾಪ್ಟರ್ ಮೂಲಕ ಹಡಗಿಗೆ ಕರೆದೊಯ್ಯಲಾಯಿತು. ಲಕ್ಷದ್ವೀಪದಲ್ಲಿ ರಾಜೀವ್ ಗಾಂಧಿ ಹೆಲಿಕಾಪ್ಟರ್ ಮೂಲಕ ಮೂರು ದ್ವೀಪಕ್ಕೆ ಭೇಟಿ ನೀಡಿದ್ದರು. ಎರಡನೇ ದಿನ ಅವರು ಎರಡು ಅಥವಾ ಮೂರು ದ್ವೀಪಗಳಿಗೆ ಭೇಟಿ ನೀಡಿದ್ದಾರೆ ಎಂಬುದು ನನ್ನ ನೆನಪು ಎಂದು ಪಶ್ರಿಚಾ ಹೇಳಿದ್ದಾರೆ.

ಪಶ್ಚಿಮ ವಿಭಾಗದ ಹಡಗಿನ ಆಗಿನ ಕಮಾಂಡರ್ ಇನ್ ಚೀಫ್ ಅಡ್ಮಿರಲ್ ಎಲ್. ರಾಮ್‌ದಾಸ್ ಕೂಡ ಘಟನೆಯ ಬಗ್ಗೆ ಇದೇ ವಿವರವನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News