ಮೂಡುಪಡುಕೋಡಿ: ನೀರಿಗಾಗಿ ಹಾಹಾಕಾರ!

Update: 2019-05-10 06:57 GMT

ಬಂಟ್ವಾಳ, ಮೇ 9: ಬಂಟ್ವಾಳ ತಾಲೂಕು ಇರ್ವತ್ತೂರು ಗ್ರಾಪಂ ವ್ಯಾಪ್ತಿಯ ಮೂಡುಪಡುಕೋಡಿ ವಾರ್ಡ್ ಸಂಖ್ಯೆ 1ರಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಜನರು ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ.

ಮೂಡುಪಡುಕೋಡಿ ಒಂದನೇ ವಾರ್ಡ್‌ನ ಮುಂಡಬೆಲು, ಕೊಮ್ಮಲೆ, ಕುಕ್ಕೆರೋಡಿ, ಅಂಕದಳ, ಮೂರ್ಜೆ, ಕುದ್ರೋಟಿಕಟ್ಟೆಗಳ ಜನರು ನೀರಿನ ಸಮಸ್ಯೆಯಿಂದ ಚಿಂತಾಕ್ರಾಂತರಾಗಿದ್ದು, ಪರಿಹಾರಕ್ಕಾಗಿ ಜನ ಪ್ರತಿನಿಧಿಗಳು, ಅಧಿಕಾರಿಗಳನ್ನು ಎದುರು ನೋಡು ತ್ತಿದ್ದಾರೆ.

ಪರಿಸರದಲ್ಲಿ ಯಾರ ಬಾವಿಯಲ್ಲೂ ನೀರಿಲ್ಲ: ಪ್ರಸ್ತುತ ಕೊಳವೆ ಬಾವಿಯ ನೀರು ಸರಬರಾಜಾಗುತ್ತಿಲ್ಲ. ಮುಂಡಬೈಲುನಲ್ಲಿ ಕಳೆದ ವರ್ಷವಷ್ಟೆ ಕೊಳವೆ ಬಾವಿ ನಿರ್ಮಿಸಲಾಗಿದ್ದು, ಇದರಿಂದ ಸುಮಾರು 65 ಮನೆಗಳಿಗೆ ಸಂಪರ್ಕವಿದೆ. ಕೊಮ್ಮಲೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದವರ ಕಾಲನಿಗೆ ಇದೇ ಕೊಳವೆಬಾವಿಯಿಂದ ನೀರು ಸರಬರಾಜು ಆಗುತ್ತಿತ್ತು. ಆದರೆ, ಈ ಮನೆಗಳು ತುಂಬಾ ಎತ್ತರ ಪ್ರದೇಶದಲ್ಲಿದೆ. ಕೆಳ ಬಾಗಕ್ಕೆ ಸ್ವಲ್ಪ ಹೊತ್ತು ನೀರು ಸರಬರಾಜಾದ ಬಳಿಕ ಗೇಟ್ ವಾಲ್ವ್ ಬಂದ್ ಮಾಡಿ ಮೇಲ್ಗಡೆಯ ಮನೆಗಳಿಗೆ ನೀರು ಹರಿಯುವಂತೆ ಮಾಡಬಹುದು. ಆದರೆ, ಅದಕ್ಕೆ ಅವಕಾಶವಾಗುತ್ತಿಲ್ಲ. ಬದಲಾಗಿ ನಾವೇ ಕೆಳಗೆ ಹೋಗಿ ಕಾದು ನೀರು ಹೊತ್ತು ತರುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯ ನಿವಾಸಿ, ಗ್ರಾಪಂ ಸದಸ್ಯೆಯೂ ಆದ ಸುನಂದಾ ಅವರು.

ಹಿಂದೆ ಸುಮಾರು ಒಂದು ಕಿ.ಮೀ. ದೂರದಿಂದ ಖಾಸಗಿ ಬಾವಿಯಿಂದ ನೀರು ತರುತ್ತಿದ್ದೆವು. ಆದರೆ, ಈ ಪರಿಸರದಲ್ಲಿ ಯಾರ ಬಾವಿಯಲ್ಲೂ ನೀರಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಹೆದ್ದಾರಿ ಕಾಮಗಾರಿಗಾಗಿ ಪೈಪ್‌ಲೈನ್ ಕಟ್: ಬಾಂಬಿಲದಲ್ಲಿ ಹೆದ್ದಾರಿ ಬದಿ ಸುಮಾರು 25 ವರ್ಷ ಹಳೆಯದಾದ ಕೊಳವೆಬಾವಿಯಿದ್ದು, ಅದರಿಂದ 25 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್ ಮೂಲಕ ನೀರು ಸರಬರಾಜಾಗುತ್ತಿದ್ದು, ಇದರಿಂದ ಬಾಂಬಿಲದ ಸುಮಾರು 25 ಮನೆಗಳಿಗೆ ನೀರು ಪೂರೈಕೆಯಾಗುತ್ತಿತ್ತು. ಗುಂಪಕಲ್ಲು, ಕುಕ್ಕೆರೋಡಿ ಕಡೆಗಳಿಗೆ ಕೊಳವೆಬಾವಿಯಿಂದ ನೇರವಾಗಿ ಸಂಪರ್ಕವಿದೆ. ಆದರೆ, ಹೆದ್ದಾರಿ ಕಾಮಗಾರಿ ವೇಳೆ ಪೈಪ್‌ಲೈನ್ ತುಂಡರಿಸಿದ್ದು, ನೀರು ಸರಬರಾಜು ಸ್ಥಗಿತಗೊಂಡಿದೆ. ಆ ಬಾಗದ ಮಣ್ಣು ತೆಗೆದ ಬಳಿಕವಷ್ಟೆ ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ಗುತ್ತಿಗೆದಾರರ ಹೇಳಿಕೆ. ಸದ್ಯ ಇಲ್ಲಿನ ಜನರು ಖಾಸಗಿ ಬಾವಿ, ಕೊಳವೆ ಬಾವಿಯನ್ನು ಆಶ್ರಯಿಸಿದ್ದರೂ ನೀರು ಸಾಲುವುದಿಲ್ಲ ಎಂದು ನೀರಿನ ನಿರ್ವಹಣೆಯ ಮುಹಮ್ಮದ್‌ರ ಅಭಿಪ್ರಾಯ.

ಇಲ್ಲಿರುವ ಕೊಳವೆ ಬಾವಿಯಲ್ಲಿ ಬೇಕಾಗುವಷ್ಟು ನೀರಿಲ್ಲ. ಕೆಲವೆಡೆ ತೀರಾ ನೀರಿನ ಸಮಸ್ಯೆಯಿದ್ದು, ಪಿಕಪ್ ವಾಹನದಲ್ಲಿ ಸರಬರಾಜು ಮಾಡಲಾಗಿದೆ. ಗಾಪಂ ಅಧ್ಯಕ್ಷರೇ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರು. ಆದರೆ, ಇದುವರೆಗೆ ಯಾವುದೇ ಸಭೆ ನಡೆಸಿಲ್ಲ.

ಸುರೇಂದ್ರ ಶೆಟ್ಟಿ, ಗ್ರಾಪಂ ಸದಸ್ಯ

ಗ್ರಾಮೀಣ ಪ್ರದೇಶದಲ್ಲಿಯೂ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಪರಿಹಾರ ಕಾಣುತ್ತಿಲ್ಲ. ನೀರಿನ ವ್ಯವಸ್ಥೆಗೆ ಕೈಗೊಂಡಿರುವ ಕ್ರಮಗಳು ಶೀಘ್ರವಾಗಿ ಅನುಷ್ಠಾನಗೊಳ್ಳುವಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು.

ಎಂ.ತುಂಗಪ್ಪ ಬಂಗೇರ. ಜಿಪಂ ಸದಸ್ಯರು, ಸಂಗಬೆಟ್ಟು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News