ಗುಜರಾತ್ ಹತ್ಯಾಕಾಂಡದ ಬಳಿಕ ಮೋದಿ ವಜಾಕ್ಕೆ ಅಟಲ್ ಬಯಸಿದ್ದರು, ಅಡ್ವಾಣಿ ತಡೆದಿದ್ದರು: ಯಶವಂತ್ ಸಿನ್ಹಾ

Update: 2019-05-10 16:55 GMT

ಭೋಪಾಲ್, ಮೇ 10: ಗುಜರಾತ್ ಹತ್ಯಾಂಕಾಂಡದ ಬಳಿಕ ಗುಜರಾತ್‌ನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ವಜಾಗೊಳಿಸಲು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಿದ್ಧತೆ ನಡೆಸಿದ್ದರು. ಆದರೆ, ಆಗಿನ ಗೃಹ ಸಚಿವರಾಗಿದ್ದ ಎಲ್.ಕೆ. ಅಡ್ವಾಣಿ ಅವರು ಸಂಪುಟಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ನಿರ್ಧಾರ ತಡೆ ಹಿಡಿಯಲಾಗಿತ್ತು ಎಂದು ಬಿಜೆಪಿ ಮಾಜಿ ನಾಯಕ ಯಶವಂತ್ ಸಿನ್ಹಾ ಶುಕ್ರವಾರ ಪ್ರತಿಪಾದಿಸಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾತನಾಡಿದರು. ಗುಜರಾತ್‌ನಲ್ಲಿ ಕೋಮ ಹಿಂಸಾಚಾರ ಸಂಭವಿಸಿದ ಬಳಿಕ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕು ಎಂದು ಅಟಲ್ ಬಿಹಾರಿ ವಾಜಪೇಯಿ ನಿರ್ಧರಿಸಿದ್ದರು. ‘‘2002ರಲ್ಲಿ ಗೋವಾದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಟಲ್‌ಜಿ ಅವರು ಮೋದಿಜೀ ರಾಜೀನಾಮೆ ನೀಡದಿದ್ದರೆ, ಗುಜರಾತ್ ಸರಕಾರವನ್ನು ವಜಾಗೊಳಿಸಬೇಕು ಎಂದು ಹೇಳಿದ್ದರು.’’ ಎಂದು ಅವರು ತಿಳಿಸಿದ್ದಾರೆ. “ನನ್ನ ಮಾಹಿತಿ ಪ್ರಕಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ಸರಕಾರವನ್ನು ವಜಾಗೊಳಿಸುವ ಬಗ್ಗೆ ಅಡ್ವಾಣಿಜೀ ವಿರೋಧ ವ್ಯಕ್ತಪಡಿಸಿದ್ದರು. ಮೋದಿ ಜೀ ಅವರನ್ನು ವಜಾಗೊಳಿಸಿದರೆ, ನಾನು ರಾಜೀನಾಮೆ ನೀಡುತ್ತೇನೆ ಎಂದು ಅವರು ಅಟಲ್‌ಜಿ ಅವರಲ್ಲಿ ಹೇಳಿದ್ದರು. ಆದುದರಿಂದ ವಾಜಪೇಯಿ ಅವರು ತಮ್ಮ ನಿರ್ಧಾರವನ್ನು ತಡೆ ಹಿಡಿದಿದ್ದರು ಹಾಗೂ ಮೋದಿಜೀ ಅವರು ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು ಎಂದು ಸಿನ್ಹಾ ಹೇಳಿದ್ದಾರೆ.

ನೌಕಾ ಪಡೆಯ ವಿರಾಟ್ ಹಡಗನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ದುರ್ಬಳಕೆ ಮಾಡಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಅವರು, ಇದು ವಿವಾದದ ವಿಚಾರವೇ ಅಲ್ಲ. ನೌಕಾ ಪಡೆಯ ಮಾಜಿ ಅಧಿಕಾರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News