ಗಡಿಪಾರು ಮಾಡಲು ಸಾಧ್ಯವಾಗದ ವಿದೇಶಿಯರನ್ನು ಅಸ್ಸಾಂನ ಬಂಧನಾ ಕೇಂದ್ರದಲ್ಲಿ ಇರಿಸಬಾರದು: ಸುಪ್ರೀಂ ಕೋರ್ಟ್

Update: 2019-05-11 04:09 GMT

ಹೊಸದಿಲ್ಲಿ, ಮೇ 10: ತಾಯ್ನಾಡಿಗೆ ಗಡಿಪಾರು ಮಾಡಲು ಸಾಧ್ಯವಾಗದೇ ಇರುವ ವಿದೇಶಿಯರನ್ನು ಅಸ್ಸಾಂನ ಬಂಧನ ಕೇಂದ್ರದಲ್ಲಿ ಎಂದಿಗೂ ಇರಿಸಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಸಂಬಂಧಿತ ಅಧಿಕಾರಿಗಳಿಗೆ ಅಗತ್ಯವಿರುವಾಗ ಲಭ್ಯವಾಗುವ ಖಾತರಿ ಇದ್ದಲ್ಲಿ ಈ ವ್ಯಕ್ತಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಬಗ್ಗೆ ಖಾತರಿ ನೀಡುವ ಬಗ್ಗೆ ಸಲಹೆ ನೀಡುವಂತೆ ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂತಿಗಳಾದ ದೀಪಕ್ ಗುಪ್ತಾ ಹಾಗೂ ಸಂಜೀವ್ ಜೈನ್ ಅವರನ್ನು ಒಳಗೊಂಡ ಪೀಠ ಪ್ರಶ್ನಿಸಿತು.

ಈ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ಅವರನ್ನು ನ್ಯಾಯಾಲಯ ಆ್ಯಮಿಕಸ್ ಕ್ಯೂರಿಯಾಗಿ ನಿಯೋಜಿಸಿದೆ. ಬಂಧಿತರು ರೇಡಿಯೋ ಕಾಲರ್ ಉಪಕರಣವನ್ನು ಧರಿಸುವಂತೆ ಮಾಡುವುದು, ಇಬ್ಬರು ಭಾರತೀಯರ ಶ್ಯೂರಿಟಿ ಹಾಗೂ 1 ಲಕ್ಷ ರೂಪಾಯಿ ಬಾಂಡ್‌ನ ಸಲಹೆ ನೀಡಿ ರಾಜ್ಯ ಸರಕಾರ ಸಲ್ಲಿಸಿದ ಅಫಿದಾವಿತ್ ಅನ್ನು ಪ್ರಶಾಂತ್ ಭೂಷಣ್ ಉಲ್ಲೇಖಿಸಿದರು. ವಿದೇಶಿಯರನ್ನು ಆರು ತಿಂಗಳ ಒಳಗೆ ಗಡಿಪಾರು ಮಾಡಲು ವಿಫಲವಾದಲ್ಲಿ, ಅವರನ್ನು ಬಿಡುಗಡೆ ಮಾಡಬೇಕು ಎಂದು ಅವರು ಹೇಳಿದರು.

ಆದರೆ, ಇದು 6 ತಿಂಗಳ ಬಳಿಕ ಬಿಡುಗಡೆಯಾಗುತ್ತಾರೆ ಎಂಬ ನಂಬಿಕೆಯಿಂದ ದಾಖಲೆಗಳು ಇಲ್ಲದ ಭಾರತ ಪ್ರವೇಶಿಸುವುದಕ್ಕೆ ಉತ್ತೇಜನ ನೀಡಬಾರದು ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ. ಅಸ್ಸಾಂನ ಬಂಧನ ಕೇಂದ್ರದಲ್ಲಿ ಜೀವಿಸುತ್ತಿರುವರ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲಿ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಸಲ್ಲಿಸಿದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News