×
Ad

ಸಿಖ್ ವಿರೋಧಿ ಹಿಂಸಾಚಾರ ಕುರಿತ ಹೇಳಿಕೆಗೆ ಸ್ಯಾಮ್ ಪಿತ್ರೋಡಾ ಕ್ಷಮೆ ಯಾಚಿಸಲಿ: ರಾಹುಲ್ ಗಾಂಧಿ

Update: 2019-05-11 09:51 IST

ಹೊಸದಿಲ್ಲಿ, ಮೇ 11: 1984ರಲ್ಲಿ ನಡೆದ ಸಿಖ್ ವಿರೋಧಿ ಹಿಂಸಾಚಾರದ ಬಗ್ಗೆ ಸ್ಯಾಮ್ ಪಿತ್ರೋಡಾ ಲಘುವಾಗಿ ಹೇಳಿಕೆ ನೀಡಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಆಕ್ಷೇಪಿಸಿದ್ದು, ಈ ಹೇಳಿಕೆಗಾಗಿ ಪಿತ್ರೋಡಾ ಕ್ಷಮೆ ಯಾಚಿಸಬೇಕು ಎಂದು ಸೂಚಿಸಿದ್ದಾರೆ.

ರವಿವಾರ ದೆಹಲಿ ಮತ್ತು ಪಂಜಾಬ್‌ನಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಪಿತ್ರೋಡಾ ಹೇಳಿಕೆಯಿಂದ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಹಿನ್ನೆಲೆಯಲ್ಲಿ ರಾಹುಲ್ ಈ ಸೂಚನೆ ನೀಡಿದ್ದಾರೆ. 1984ರ ಸಿಖ್ ದಂಗೆಯನ್ನು "ಅಸಾಮಾನ್ಯ ನೋವಿಗೆ ಕಾರಣವಾದ ಅನಗತ್ಯ ದುರಂತ" ಎಂದು ಬಣ್ಣಿಸಿದ್ದಾರೆ.

"ನನ್ನ ಪ್ರಕಾರ ನ್ಯಾಯ ಒದಗಿಸಬೇಕು. 1984ರ ಹಿಂಸಾಚಾರಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕು. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಕ್ಷಮೆ ಯಾಚಿಸಿದ್ದಾರೆ. ತಾಯಿ ಸೋನಿಯಾ ಗಾಂಧಿ ಕೂಡಾ ಕ್ಷಮೆ ಕೋರಿದ್ದಾರೆ. ಇಂಥ ಭಯಾನಕ ಘಟನೆ ನಡೆಯಬಾರದಿತ್ತು ಎನ್ನುವುದು ನಮ್ಮ ಸ್ಪಷ್ಟ ಅಭಿಪ್ರಾಯ. ಸ್ಯಾಮ್ ಪಿತ್ರೋಡಾ ಹೇಳಿಕೆ ಸ್ವೀಕಾರಾರ್ಹವಲ್ಲ. ಈ ಬಗ್ಗೆ ಅವರಿಗೆ ನೇರವಾಗಿ ಹೇಳುತ್ತೇನೆ. ತಮ್ಮ ಹೇಳಿಕೆಗಾಗಿ ಅವರು ಕ್ಷಮೆ ಯಾಚಿಸಲೇಬೇಕು" ಎಂದು ಫೇಸ್‌ಬುಕ್ ಹೇಳಿಕೆಯಲ್ಲಿ ರಾಹುಲ್ ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷ, ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. "ಯಾವುದೇ ನಿರ್ದಿಷ್ಟ ವ್ಯಕ್ತಿ ನೀಡಿದ ಹೇಳಿಕೆ ಪಕ್ಷದ ನಿಲುವಲ್ಲ" ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದರು.

ಬಿಜೆಪಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಬಿಟ್ಟು ಈ ದಂಗೆಯನ್ನು ಪ್ರತಿ ಚುನಾವಣೆಯಲ್ಲಿ ಮತ ಸೃಷ್ಟಿಸಲು ದುರುಪಯೋಗಪಡಿಸಿಕೊಳ್ಳು ತ್ತಿದೆ ಎಂದು ಆಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News