×
Ad

ರೋಗಿಯ ಜೀವವುಳಿಸಲು ರಮಝಾನ್ ಉಪವಾಸ ಮುರಿದು ರಕ್ತದಾನ ಮಾಡಿದ ಯುವಕ

Update: 2019-05-11 13:02 IST

ಗುವಹಾಟಿ : ಬುಧವಾರ, ರಮಝಾನ್ ಉಪವಾಸದ ಎರಡನೆಯ ದಿನ  26 ವರ್ಷದ ಪನವುಲ್ಲಾ ಅಹ್ಮದ್, ಸಹರಿ (ಮುಂಜಾನೆಯ ಉಪಾಹಾರ) ನಂತರ  ವಿರಮಿಸುತ್ತಿದ್ದ ಸಂದರ್ಭ ತನ್ನ ರೂಮ್ ಮೇಟ್ ತಾಪಶ್ ಭಗವತಿ ತೀರಾ ಕಳವಳಗೊಂಡಿರುವುದನ್ನು ಗಮನಿಸಿದ.

 ರಕ್ತದಾನಿಗಳ ಗುಂಪಾದ ಟೀಮ್  ಹ್ಯುಮಾನಿಟಿಯ ಸಕ್ರಿಯ ಸದಸ್ಯನಾಗಿದ್ದ ತಾಪಶ್ ನಿಗೆ ಕಳೆದ ರಾತ್ರಿ  ಬಂದ ಕರೆಯೊಂದು ರೋಗಿಯೊಬ್ಬರಿಗೆ ತುರ್ತು ‘ಒ ಪಾಸಿಟಿವ್'  ಗುಂಪಿನ ಎರಡು ಯುನಿಟ್ ರಕ್ತ ಅಗತ್ಯವಿದೆ ಹಾಗೂ ರೋಗಿಯ ಕುಟುಂಬ ರಕ್ತ ಪಡೆಯಲು ಯತ್ನಿಸಿ ವಿಫಲವಾಗಿದ್ದನ್ನು  ತಿಳಿಸಿತ್ತು.

ಗುವಹಾಟಿಯ ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುವ ಅಹ್ಮದ್ ತನ್ನ ರೂಮ್ ಮೇಟ್ ನಲ್ಲಿ ವಿಚಾರಿಸಿ ತಾನು ರಕ್ತ ನೀಡಲು ಸಿದ್ಧ ಎಂದು ತಿಳಿಸಿದ್ದ.

``ಆತ ರಕ್ತ ನೀಡುವುದಾಗಿ ಹೇಳಿದಾಗ ಖುಷಿ ಪಟ್ಟೆ ಆದರೆ ಆತ ಉಪವಾಸ ಮುರಿಯುವುದು ನನಗೆ ಬೇಕಿರಲಿಲ್ಲ, ಆದರೆ ಆತ ಮಾತ್ರ ಹಠ ಹಿಡಿದಿದ್ದ,'' ಎಂದು ಅದೇ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ಟೆಕ್ನಿಶಿಯನ್ ಆಗಿರುವ ತಾಪಶ್ ಹೇಳುತ್ತಾನೆ.

ಇಬ್ಬರು ಸ್ನೇಹಿತರೂ ಅಸ್ಸಾಂನ ಧೇಮಜಿ ಎಂಬಲ್ಲಿನ 50 ವರ್ಷದ ಉದ್ಯಮಿ ರಂಜನ್ ಗೊಗೊಯಿ ದಾಖಲಾಗಿದ್ದ ಇನ್ನೊಂದು ಆಸ್ಪತ್ರೆಗೆ ಧಾವಿಸಿದ್ದರು. ಗೊಗೊಯಿ ಅವರ ಹೊಟ್ಟೆಯಲ್ಲಿನ ಎರಡು ಟ್ಯೂಮರ್ ಹೊರತೆಗೆಯುವ ಶಸ್ತ್ರಕ್ರಿಯೆ ನಡೆಯಲಿದ್ದುದರಿಂದ ನಂತರ ಅವರಿಗೆ ರಕ್ತದ ಅವಶ್ಯಕತೆಯಿತ್ತು.

``ನಾನು ಕೆಲ ಮೌಲವಿಗಳನ್ನು ಸಂಪರ್ಕಿಸಿದಾಗ ರಕ್ತದಾನ ಮಾಡುವಂತೆ ಆದರೆ ನಿತ್ರಾಣತೆ ಕಾಡಿದರೆ  ಉಪವಾಸ ಮುಂದುವರಿಸದಂತೆ ಸಲಹೆ ನೀಡಿದರು,'' ಎಂದು  ಅಹ್ಮದ್ ಹೇಳಿದ್ದಾನೆ.

``ನಾನು ದಾನ ಮಾಡಿದ ಒಂದು ಯುನಿಟ್ ರಕ್ತವನ್ನು ಆಸ್ಪತ್ರೆ ತನ್ನ ಬ್ಲಡ್ ಬ್ಯಾಂಕಿನಲ್ಲಿರಿಸಿ ಗೊಗೊಯಿ ಅವರಿಗೆ ಬೇಕಾದ `ಒ ಪಾಸಿಟಿವ್' ರಕ್ತ ಒದಗಿಸಿತು. ನಂತರ ನಾನು ಉಪವಾಸ ಮುರಿದು ಏನಾದರೂ ತಿನ್ನಬೇಕಾಯಿತು,''ಎಂದು ಅಹ್ಮದ್ ಹೇಳುತ್ತಾನೆ.

ಅತ್ತ ರೋಗಿಯ ಶಸ್ತ್ರಚಿಕಿತ್ಸೆ ನಡೆದು ಆತನ ಹೊಟ್ಟೆಯಲ್ಲಿನ ಎರಡು ಟ್ಯೂಮರ್ ತೆಗೆದ ವೈದ್ಯರು ನಂತರ ಕ್ಯಾನ್ಸರ್ ಕಾರಕ ಟ್ಯೂಮರ್ ಹೌದೇ ಅಲ್ಲೇ ಎಂದು ಪರೀಕ್ಷಿಸಲಿದ್ದಾರೆ. ರೋಗಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಆತನ ಉದಾತ್ತ ಗುಣ ಹಾಗೂ ಸೇವಾ ಮನೋಭಾವಕ್ಕೆ ಗೊಗೊಯಿ ಕುಟುಂಬ ಧನ್ಯವಾದ ಹೇಳಿದೆ. ``ರಕ್ತದಾನ ಮಾಡಿದ್ದಕ್ಕೆ  ಧನ್ಯವಾದ ಸೂಚಕವಾಗಿ ಆತನಿಗೆ ಏನಾದರೂ ನೀಡಲೆತ್ನಿಸಿದಾಗ ಆತ ನಿರಾಕರಿಸಿದ,'' ಎಂದು ಗೊಗೊಯಿ ಅವರ ಸಂಬಂಧಿ ಬಿನೋದ್ ಬೈಶ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News