ವಿವಾಹ ದಿಬ್ಬಣದಲ್ಲಿ ಕುದುರೆಯೇರಿದ ದಲಿತ ಯುವಕ; ಮೇಲ್ಜಾತಿಯವರಿಂದ ದಲಿತರ ಬಹಿಷ್ಕಾರ

Update: 2019-05-11 09:42 GMT

ಅಹ್ಮದಾಬಾದ್: ಮದುವೆ ದಿಬ್ಬಣದ ಮೆರವಣಿಗೆಯಲ್ಲಿ ದಲಿತ ಯುವಕನೊಬ್ಬ ಕುದುರೆಯೇರಿ ಬಂದಿರುವುದನ್ನು ಮೇಲ್ಜಾತಿಯ ಜನರು ವಿರೋಧಿಸಿ ದಲಿತರನ್ನು ಬಹಿಷ್ಕರಿಸಿದ ಘಟನೆ ಉತ್ತರ ಗುಜರಾತ್ ರಾಜ್ಯದ ಮೆಹ್ಸಾನ ಜಿಲ್ಲೆಯ ಲ್ಹೋರ್ ಎಂಬ ಗ್ರಾಮದಿಂದ ವರದಿಯಾಗಿದೆ. ರಾಜ್ಯದ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಈ ವಿದ್ಯಮಾನ ಬೆಳಕಿಗೆ ಬರುತ್ತಿದ್ದಂತೆಯೇ ಪಟೇಲ್ ಅಲ್ಲಿಗೆ ಧಾವಿಸಿದ್ದಾರೆ.

ಮೇಲ್ಜಾತಿಯವರ ಬಹಿಷ್ಕಾರದಿಂದ ತಮಗೆ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳಾದ ಹಾಲು ಮತ್ತಿತರ ದಿನಸಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ, ಆಟೋ ಚಾಲಕರೂ ತಮ್ಮನ್ನು ತಮ್ಮ ವಾಹನದಲ್ಲಿ ಹತ್ತಿಸಿಕೊಳ್ಳುತ್ತಿಲ್ಲ ಎಂದು ದಲಿತರು ದೂರಿದ್ದಾರೆ.

ಮಂಗಳವಾರ ವಿವಾಹ ದಿಬ್ಬಣದ ಮೆರವಣಿಗೆ ನಡೆದಾಗ ಮೇಲ್ಜಾತಿಯ ಜನರು ದಲಿತರು ತಮ್ಮ ಆಸೆ ಆಕಾಂಕ್ಷೆಗಳನ್ನು ಹತ್ತಿಕ್ಕಬೇಕೆಂಬ ಸಲಹೆ ನೀಡಿದ್ದರು. ದಲಿತ ಸಮುದಾಯವನ್ನು ಬಹಿಷ್ಕರಿಸಲು ಕರೆ ನೀಡಿದ ಗ್ರಾಮದ ಸರಪಂಚ ವಿನುಜಿ ಠಾಕುರ್ ಮತ್ತಿತರರನ್ನು ಬಂಧಿಸಲಾಗಿದೆ.

ತಾವು ಗ್ರಾಮದ ಮುಖ್ಯಸ್ಥರು ಹಾಗೂ ದಲಿತರ ಜತೆ ಮಾತನಾಡಿದ್ದು ದಲಿತರು ತಮಗೆ ರಕ್ಷಣೆ ಕೋರಿದ್ದಾರೆ ಅವರಿಗೆ ಸಂಪೂರ್ಣ ರಕ್ಷಣೆಯ ಭರವಸೆಯನ್ನು ನೀಡಿದ್ದಾಗಿ ಪಟೇಲ್ ಹೇಳಿದ್ದಾರೆ.

ತರುವಾಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಈಶ್ವರಭಾಯಿ ಪರ್ಮಾರ್ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News