ರಮಝಾನ್ ಮಾಸದಲ್ಲಿ ಕಾಮಕಸ್ತೂರಿ ಸೇವನೆಯ ಲಾಭಗಳು

Update: 2019-05-11 12:20 GMT

ಪವಿತ್ರ ರಮಜಾನ್ ಮಾಸ ಮತ್ತೆ ಬಂದಿದೆ. ವಿಶ್ವಾದ್ಯಂತ ಮುಸ್ಲಿಮರು ಒಂದು ತಿಂಗಳ ಕಾಲ ಕಟ್ಟುನಿಟ್ಟಿನ ಉಪವಾಸವನ್ನು ಆಚರಿಸುತ್ತಾರೆ. ನಸುಕಿನಿಂದ ಸಂಜೆಯವರೆಗೆ ಉಪವಾಸ ಮತ್ತು ನಂತರ ಹೊತ್ತಲ್ಲದ ಹೊತ್ತಲ್ಲಿ ಆಹಾರ ಸೇವನೆಯಿಂದಾಗಿ ಸಹಜವಾಗಿಯೇ ನಿರ್ಜಲೀಕರಣ ಮತ್ತು ನಿಶ್ಶಕ್ತಿಯ ಅನುಭವವಾಗುತ್ತದೆ.

ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವನೆಯು ಪವಿತ್ರ ರಮಝಾನ್ ಮಾಸದಲ್ಲಿ ನಿಮ್ಮ ಶರೀರದಲ್ಲಿ ಶಕ್ತಿಯನ್ನು ಕಾಯ್ದುಕೊಳ್ಳುವ ಮತ್ತು ನಿರ್ಜಲೀಕರಣವುಂಟಾಗದಂತೆ ನೋಡಿಕೊಳ್ಳುವ ಹಲವಾರು ಮಾರ್ಗಗಳಲ್ಲಿ ಒಂದಾಗಿದೆ. ಕಾಶ್ಮೀರಿಯಲ್ಲಿ ‘ಬಾಬ್ರಿ ಬ್ಯೂಲ್’ ಎಂದು ಕರೆಯಲಾಗುವ ಕಾಮಕಸ್ತೂರಿ ಬೀಜಗಳು ರಮಝಾನ್ ಮಾಸದಲ್ಲಿ ವಿಶ್ಯಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತದೆ.

ನಾರು,ಪ್ರೋಟಿನ್,ಕ್ಯಾಲ್ಸಿಯಂ,ಕಬ್ಬಿಣ,ಮ್ಯಾಗ್ನೇಷಿಯಂ,ಪೊಟ್ಯಾಷಿಯಂ ಮತ್ತು ವಿಟಾಮಿನ್‌ಗಳನ್ನು ಸಮೃದ್ಧವಾಗಿ ಒಳಗೊಂಡಿರುವ ಕಾಮಕಸ್ತೂರಿ ಬೀಜ ರಮಝಾನ್ ಮಾಸದಲ್ಲಿ ಅಗತ್ಯವಾಗಿ ಸೇವಿಸಲೇಬೇಕಾದ ಆಹಾರವಾಗಿದೆ. ಇದು ಶರೀರದ ಶಕ್ತಿಯನ್ನು ಕಾಯ್ದುಕೊಳ್ಳುವ ಜೊತೆಗೆ ಅದನ್ನು ತಂಪುಗೊಳಿಸುತ್ತದೆ ಮತ್ತು ನಿರ್ಜಲೀಕರಣದಿಂದ ದೂರವಿರಿಸುತ್ತದೆ.

ರಮಝಾನ್ ಮಾಸದಲ್ಲಿ ಕಾಮಕಸ್ತೂರಿ ಬೀಜಗಳನ್ನು ಸೇವಿಸುವುದರ ಅದ್ಭುತ ಆರೋಗ್ಯಲಾಭಗಳ ಮಾಹಿತಿ ಇಲ್ಲಿದೆ.....

► ಪೋಷಕಾಂಶಗಳ ಆಗರ

ನಿತ್ಯದ ಆಹಾರದಲ್ಲಿ ಕಾಮಕಸ್ತೂರಿ ಬೀಜಗಳ ಸೇರ್ಪಡೆಯು ನಷ್ಟಗೊಂಡ ಎಲ್ಲ ಕಾರ್ಬೊಹೈಡ್ರೇಟ್‌ಗಳು, ಪ್ರೋಟಿನ್‌ಗಳು,ಕೊಬ್ಬುಗಳು,ಸಕ್ಕರೆ,ನಾರು,ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಮರಳಿ ಪಡೆಯಲು ನೆರವಾಗುತ್ತದೆ. ಅದು ಶರೀರದ ಕಾರ್ಯಗಳನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ಹಲವಾರು ಕಾಯಿಲೆಗಳಿಂದ ದೂರವಿರಿಸುತ್ತದೆ.

► ಪಚನ ಕ್ರಿಯೆಗೆ ನೆರವಾಗುತ್ತದೆ

 ಕಾಮಕಸ್ತೂರಿ ಬೀಜಗಳಲ್ಲಿ ಅಧಿಕ ಪ್ರಮಾಣದಲ್ಲಿ ಕರಗದ ನಾರು ಇರುವುದರಿಂದ ಅವು ಅತ್ಯುತ್ತಮ ಸಾರಸಂಗ್ರಹಿ ಪರಿಣಾಮಗಳನ್ನು ಹೊಂದಿವೆ. ಶರೀರದಲ್ಲಿಯ ವಿಷವಸ್ತುಗಳನ್ನು ನಿವಾರಿಸುವ ಗುಣ ಹೊಂದಿರುವ ಈ ಬೀಜಗಳು ಇಡೀ ಜಠರಗರುಳು ನಾಳವನ್ನು ಸ್ವಚ್ಛಗೊಳಿಸುತ್ತವೆ. ಜಠರವು ವಿಷಮುಕ್ತಗೊಳ್ಳುವುದರಿಂದ ಜೀರ್ಣಕ್ರಿಯೆಯು ಸುಲಭವಾಗುತ್ತದೆ ಮತ್ತು ಅಜೀರ್ಣದಿಂದ ಉಂಟಾಗುವ ಸಮಸ್ಯೆಗಳು ದೂರವಾಗುತ್ತವೆ.

► ಮಲಬದ್ಧತೆಯನ್ನು ನಿವಾರಿಸುತ್ತದೆ

ಕರಗದ ನಾರನ್ನು ಸಮೃದ್ಧವಾಗಿ ಹೊಂದಿರುವುದರಿಂದ ಈ ಬೀಜಗಳು ಮಲಬದ್ಧತೆಯ ಸಮಸ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ ಅಥವಾ ಸಂಪೂರ್ಣವಾಗಿ ಗುಣಪಡಿಸುತ್ತವೆ. ಇದಕ್ಕಾಗಿ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದಿಷ್ಟು ಬೀಜಗಳನ್ನು ಒಂದು ಗ್ಲಾಸ್ ಹಾಲಿನಲ್ಲಿ ನೆನೆಸಿ ಸೇವಿಸಿದರೆ ಸಾಕು.

► ಆಮ್ಲೀಯತೆಯನ್ನು ನಿವಾರಿಸುತ್ತದೆ

ಕಾಮಕಸ್ತೂರಿಯಂತಹ ಬೀಜಗಳು ನಮ ಜಠರಗರುಳು ನಾಳಕ್ಕೆ,ವಿಶೇಷವಾಗಿ ಜಠರಕ್ಕೆ ಹಿತಕಾರಿಯಾಗಿವೆ. ಉದರದಲ್ಲಿ ತೀವ್ರ ಉರಿಯ ಅನುಭವವಾಗುತ್ತಿದ್ದರೆ ಕೆಲವು ಕಾಮಕಸ್ತೂರಿ ಬೀಜಗಳನ್ನು ಸೇವಿಸಬೇಕು. ಒಂದು ವಾರ ಕಾಲ ಈ ಕೆಲಸ ಮಾಡಿದರೆ ವ್ಯತ್ಯಾಸವು ಖಂಡಿತ ಗೊತ್ತಾಗುತ್ತದೆ.

► ಶರೀರದ ಉಷ್ಣತೆಯನ್ನು ನಿಯಂತ್ರಿಸುತ್ತದೆ

ಈ ಬಿರುಬೇಸಿಗೆಯ ದಿನಗಳಲ್ಲಿ ನಮ್ಮ ಶರೀರವನ್ನು ತಂಪಾಗಿರಿಸಲು ಕಾಮಕಸ್ತೂರಿ ಬೀಜಗಳು ವರದಾನವಾಗಿವೆ. ಗರಿಷ್ಠ ತಂಪನ್ನು ನೀಡುವ ಈ ಬೀಜಗಳನ್ನು ಪರಿಣಾಮಕಾರಿ ಶರೀರ ಶೀತಕಗಳನ್ನಾಗಿ ಬಳಸಲಾಗುತ್ತದೆ. ಇದಕ್ಕಾಗಿ ಒಂದಿಷ್ಟು ಬೀಜಗಳನ್ನು ಒಂದು ಗ್ಲಾಸ್ ತಣ್ಣೀರಿನಲ್ಲಿ ನೆನೆಸಿ ಒಂದು ಗಂಟೆ ಬಿಟ್ಟು ಅದನ್ನು ಸೇವಿಸಿದರೆ ಸಾಕು.

► ಒತ್ತಡವನ್ನು ತಗ್ಗಿಸುತ್ತದೆ

ಕಾಮಕಸ್ತೂರಿ ಬೀಜಗಳು ಅತ್ಯುತ್ತಮ ನೈಸರ್ಗಿಕ ಒತ್ತಡ ನಿವಾರಕಗಳಲ್ಲೊಂದಾಗಿವೆ. ಇವು ಶರೀರವನ್ನು ಶಾಂತಗೊಳಿಸುವ ಪರಿಣಾಮಕಾರಿ ಗುಣವನ್ನು ಹೊಂದಿದ್ದು,ಇದು ಕೆಲಮಟ್ಟಿಗೆ ಅರೋಮಾಥೆರಪಿ ಅಥವಾ ಸುಗಂಧ ಚಿಕಿತ್ಸೆಯನ್ನು ಹೋಲುತ್ತದೆ. ಹೀಗಾಗಿ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿಕೊಳ್ಳುವುದರಿಂದ ಒತ್ತಡದ ಮಟ್ಟವು ಕಡಿಮೆಯಾಗುತ್ತದೆ, ಮಾನಸಿಕ ಸ್ಪಷ್ಟತೆ ಮತ್ತು ಮನೋಬಲ ಹೆಚ್ಚುತ್ತದೆ,

► ಹಸಿವೆಯನ್ನು ನಿಯಂತ್ರಿಸುತ್ತದೆ

ಕಾಮಕಸ್ತೂರಿ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಉಪವಾಸ ಮುರಿಯುವ ಸಂದರ್ಭದಲ್ಲಿ ಅದನ್ನು ಸೇವಿಸಿ ಮತ್ತು 20 ನಿಮಿಷಗಳ ಬಳಿಕ ಆಹಾರವನ್ನು ಸೇವಿಸಿ. ಇದು ನೀವು ಅತಿಯಾಗಿ ಆಹಾರ ಸೇವಿಸುವುದನ್ನು ತಡೆಯಲು ನೆರವಾಗುತ್ತದೆ ಮತ್ತು ತುಂಬ ಹೊತ್ತಿನವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಮೊಸರು,ಹಣ್ಣುಗಳ ರಸಕ್ಕೆ ಬೀಜಗಳನ್ನು ಸೇರಿಸಿ ಸೇವಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News